ಮಂಗಳೂರು, ಮೇ 3,ರಂಜಾನ್ ಮಾಸ ಮುಗಿಯುವವರೆಗೆ ಲಾಕ್‌ಡೌನ್ ಅವಧಿ ವಿಸ್ತರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಉಡುಪಿ ಕ್ವಾಜಿ ಅಲ್ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮನವಿ ಮಾಡಿದ್ದಾರೆ.ಈ ಭಾಗದಲ್ಲಿ ಮುಸ್ಲೀಮರು ಆಡಳಿತಗಳೊಂದಿಗೆ ಸಹಕರಿಸುತ್ತಿದ್ದು,ವಕ್ಫ್ ಮಂಡಳಿಯ ಸೂಚನೆಯಂತೆ ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟಗಳು, ಪ್ರಾರ್ಥನೆಗಳು, ದರ್ಗಾ,ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳಿಂದ ದೂರವಿದ್ದಾರೆ ಎಂದು ಕ್ವಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈದ್ ಸಂದರ್ಭದಲ್ಲಿ ಲಾಕ್‌ಡೌನ್ ಸಡಿಲಿಕೆಯಿಂದ ವಾಹನ ಸಂಚಾರ ಮತ್ತು ಜನರ ಓಡಾಟ ಹೆಚ್ಚಾಗಿ ಕೊವಿಡ್-19 ಮತ್ತೊಮ್ಮೆ ಉಲ್ಬಣಗೊಳ್ಳುವ ಅಪಾಯವಿದೆ. ಮಾರಣಾಂತಿಕ ಸೋಂಕು ಹರಡುವಿಕೆ ತಡೆಯಲು ಕನಿಷ್ಠ ರಂಜಾನ್ ಮಾಸ ಮುಗಿಯುವವರೆಗೆ ಲಾಕ್‌ಡೌನ್ ಮುಂದುವರಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ನಿಯಮಗಳನ್ನು ಸಡಿಲಿಸುವುದರಿಂದ ಹಬ್ಬದ ಸಂದರ್ಭದಲ್ಲಿ ಜನರು ಬಟ್ಟೆ, ಮತ್ತಿತರ ವಸ್ತುಗಳನ್ನು ಖರೀದಿಸಲು ಮುಗಿಬೀಳಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗಲಿದೆ ಎಂದು ಅವರು ಹೇಳಿದ್ದಾರೆ.