ಕೋವಿಡ್ 19 : ಇನ್ನೊಂದು ತಿಂಗಳಲ್ಲಿ ಪ್ರಯೋಗಾಲಯಗಳ ಸಂಖ್ಯೆ 60ಕ್ಕೆ: ಡಾ. ಕೆ. ಸುಧಾಕರ್

ಬೆಂಗಳೂರು, ಮೇ 5,ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಗಾಗಿ ಸ್ಥಾಪಿಸಲಾಗಿರುವ ಪ್ರಯೋಗಾಲಯಗಳ ಸಂಖ್ಯೆಯನ್ನು ೨೯ಕ್ಕೆ ಹೆಚ್ಚಿಸಿದ್ದು, ಇನ್ನೊಂದು ತಿಂಗಳಲ್ಲಿ ೬೦ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಎಲ್ಲಾ ಖಾಸಗಿ ಹಾಗೂ ಇಎಸ್ಐ ವೈದ್ಯಕೀಯ ಕಾಲೇಜುಗಳಲ್ಲಿ ಸೋಂಕು ಪತ್ತೆಗಾಗಿ ಆರ್.ಟಿ.-ಪಿಸಿಆರ್ ಲ್ಯಾಬ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ರೋಗ ಪತ್ತೆ ವ್ಯವಸ್ಥೆ ಚುರುಕುಗೊಂಡರೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಕೋವಿಡ್ 19 ಚಿಕಿತ್ಸೆಗಾಗಿ ಇಡೀ ದೇಶದಲ್ಲಿಯೇ ಮಾದರಿ ಆಸ್ಪತ್ರೆಯಾಗಿ ಹೊರ ಹೊಮ್ಮಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರದಿಂದ ಪ್ರತಿದಿನ 900 ಮಾದರಿಗಳನ್ನು ಪರೀಕ್ಷೆಗೊಳಪಡಿಸುವ ಪ್ರಯೋಗಾಲ ಆರಂಭವಾಗಿದೆ.
ಈ ಕುರಿತು ಯುಎನ್ಐ ಕನ್ನಡ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಬೆಂಗಳೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಯಂತಿ, ವಿಕ್ಟೋರಿಯಾ ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಳವಾಗಿದೆ. ಇದರಿಂದ ರೋಗ ಪತ್ತೆ ಇನ್ನಷ್ಟು ತ್ವರಿತವಾಗಲಿದೆ ಎಂದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 128 ಮಂದಿ ಕೊರೋನಾ ಸೋಂಕಿತರು ದಾಖಲಾಗಿದ್ದು, ಪ್ರಸ್ತುತ 64 ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇದಕ್ಕಾಗಿ ತಜ್ಞ ಮತ್ತು ಪರಿಣಿತ ವೈದ್ಯಕೀಯ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಈ ಆಸ್ಪತ್ರೆ ಪಾತ್ರವಾಗಿದ್ದು, ವಿಶ್ವ ಮಟ್ಟದ ಚಕಿತ್ಸಾಸೌಲಭ್ಯಗಳನ್ನು ಒಳಗೊಂಡಿದೆ. ರಾಜ್ಯದಲ್ಲೇ ಅತ್ಯಂತ ಹಳೆಯ ಬೆಂಗಳೂರು ವೈದ್ಯಕೀಯ ಕಾಲೇಜಿನೊಂದಿಗೆ ಈ ಆಸ್ಪತ್ರೆ ಸಂಯೋಜನೆಗೊಂಡಿದೆ ಎಂದರು.