ಬೆಂಗಳೂರು, ಏಪ್ರಿಲ್ 7, ರಾಜ್ಯದಲ್ಲಿ ಖಾಸಗಿ ಚಿಕಿತ್ಸಾಲಯಗಳನ್ನು ವೈದ್ಯರು ಮುಚ್ಚಿರುವುದು 'ಅಮಾನವೀಯ ಕೃತ್ಯ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ. ಕೊರೊನಾವೈರಸ್ ಭೀತಿಯಿಂದಾಗಿ ವೈದ್ಯರು ತಮ್ಮ ಖಾಸಗಿ ಚಿಕಿತ್ಸಾಲಯಗಳನ್ನು ಮುಚ್ಚಿದ್ದಾರೆ. ಇದು ಅವರ ವೃತ್ತಿಗೆ ವಿರುದ್ಧವಾಗಿದೆ ಎಂದು ಅವರು ಟ್ವೀಟರ್ ನಲ್ಲಿ ಹೇಳಿದ್ದಾರೆ.ವೈದ್ಯರು ಚಿಕಿತ್ಸಾಲಯ ಮುಚ್ಚಿರುವುದರಿಂದ ಜನರ ಮೇಲೆ, ವಿಶೇಷವಾಗಿ ಇತರ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ಪರಿಣಾಮ ಬೀರಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಖಾಸಗಿ ಚಿಕಿತ್ಸಾಲಯಗಳನ್ನು ಮುಚ್ಚದಂತೆ ಸರ್ಕಾರ ನಿರ್ದೇಶನಗಳನ್ನು ನೀಡಿದ್ದರೂ, ವೈದ್ಯರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಿದ್ದರಾಮಯ್ಯ ದೂರಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚಿಕಿತ್ಸಾಲಯಗಳನ್ನು ತೆರೆಯುವಂತೆ ವೈದ್ಯರಿಗೆ ಸೂಚಿಸಬೇಕು. ಚಿಕಿತ್ಸಾಲಯ ತೆರೆಯದಿದ್ದರೆ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.