ಬೆಂಗಳೂರು 15: ನಗರದ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾನುವಾರುಗಳ ಮಾಲೀಕರಿಗೆ ಬುಧವಾರ ಮೂರು ಹಸುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದರೊಂದಿಗೆ ಕುಟುಂಬಕ್ಕೆ ಮೂರು ಲಕ್ಷ ರೂ.ಗಳ ಪರಿಹಾರವನ್ನು ಜಮೀರ್ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಷ್, ಗೌಸಿ, ವಿನಾಯಕ್, ಪ್ರಸಾದ್ ಇದ್ದರು.
ಘಟನೆಗೆ ಸಂಬಂಧಿಸಿದಂತೆ ಬಿಹಾರದ ಚಂಪಾರಣ್ ಮೂಲದ ಶೇಖ್ ನಸ್ರು (30) ಎಂಬಾತನನ್ನು ಭಾನುವಾರ ಹಸುಗಳ ಕೆಚ್ಚಲು ಕತ್ತರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಹಸುಗಳ ಮಾಲೀಕ ಕರ್ಣ ಮಾತನಾಡಿ, ನನಗೆ ತೀವ್ರ ಬೇಸರವಾಗಿದೆ, ರಾತ್ರಿ ನಮ್ಮ ಮನೆ ಬಳಿಯಲ್ಲಿ ಹಸುಗಳನ್ನು ಕಟ್ಟಿ ಹಾಕಲಾಗಿತ್ತು. ಬೆಳಗ್ಗೆ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ನಾವು ದೂರು ದಾಖಲಿಸಿದ್ದೇವೆ. ನನಗೆ ನ್ಯಾಯ ಬೇಕು ಎಂದರು.