ಶಿಕ್ಷಕ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಪುನಶ್ಚೇತನ ಕಾರ್ಯಾಗಾರ ಸಹಾಯಕ: ಗಿರಡ್ಡಿ

A refresher workshop on developing the teaching profession Facilitator: Girardi

ಶಿಕ್ಷಕ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಪುನಶ್ಚೇತನ ಕಾರ್ಯಾಗಾರ ಸಹಾಯಕ: ಗಿರಡ್ಡಿ  

ಜಮಖಂಡಿ 16: ಜ್ಞಾನ, ಕೌಶಲ ಮತ್ತು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಶಿಕ್ಷಕ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಪುನಶ್ಚೇತನ ಕಾರ್ಯಾಗಾರ ಸಹಾಯಕವಾಗಿದೆ ಎಂದು ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಹೇಳಿದರು. 


ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿಜ್ಞಾನ ವಿಷಯ ಸಮೂಹದ ಆಶ್ರಯದಲ್ಲಿ ನಡೆದ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 


ಹೊಸ ಕೌಶಲಗಳನ್ನು ಕರಗತ ಮಾಡಿಕೊಂಡು ಹಾಗೂ ಈ ಮೊದಲು ಗೊತ್ತಿರುವ ಕೌಶಲಗಳನ್ನು ಇನ್ನಷ್ಟು ಸುಧಾರಿಸಿಕೊಂಡು ಪರಿಣಾಮಕಾರಿ ಬೋಧನೆಯಲ್ಲಿ ತೊಡಗಲು ಪುನಶ್ಚೇತನ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವುದು ತುಂಬಾ ಅಗತ್ಯವಿದೆ ಎಂದರು. 


ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರಿಗೆ ಮಠಾಧೀಶರಿಗಿಂತ ಹೆಚ್ಚಿನ ಜವಾಬ್ದಾರಿ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ನೈತಿಕತೆ ಬೋಧಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. 

ಶಿಕ್ಷಣ ಸಂಯೋಜಕ ಎಸ್‌.ಜಿ. ಬಿಜಾಪುರ ಮುಖ್ಯ ಅತಿಥಿಯಾಗಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬಹಳ ಪಾರದರ್ಶಕವಾಗಿ ನಡೆಯಲಿವೆ. ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಕಲು ಚಟುವಟಿಕೆಗಳಲ್ಲಿ ತೊಡಗಿದರೆ ವೆಬ್‌ಕ್ಯಾಮೆರಾ ಮೂಲಕ ಸ್ಕ್ರೀನ್‌ಶಾಟ್ ಕೇಂದ್ರ ಕಚೇರಿಗೆ ರವಾನಿಯಾಗಲಿದೆ ಎಂದು ಎಚ್ಚರಿಸಿದರು. 


ವಿಜ್ಞಾನ ವಿಷಯ ಸಮೂಹದ ನೋಡಲ್ ಅಧಿಕಾರಿ ಡಿ.ಡಿ. ಕಾಂಬಳೆ, ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಇದ್ದರು. ದೀಕ್ಷಾ ಇಂಗಳಗಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಸಂಗೀತ ಶಿಕ್ಷಕಿ ದೀಪಾ ಹಾವನಾಳ ಸ್ವಾಗತ ಗೀತೆ ಹಾಡಿದರು. ವಿಜ್ಞಾನ ವಿಷಯ ಸಮೂಹದ ಅಧ್ಯಕ್ಷ ಅಶೋಕ ಮಾಗಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ಹನಮಂತ ಹಾಲಳ್ಳಿ ನಿರೂಪಿಸಿದರು. ಶಿಕ್ಷಕ ಜಗದೀಶ ಕಾಂಬಳೆ ವಂದಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ವ್ಯಕ್ತಿ ಭೀಮಪ್ಪ ಬೆಲ್ಲದ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ತರಬೇತಿ ನೀಡಿದರು.