ಹಿಡ್ಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ನೀರು: ಯೋಜನೆಗೆ ತೀವ್ರ ವಿರೋಧ
ಬೆಳಗಾವಿ 16: ಹಿಡ್ಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆಯನ್ನು ವಿರೋಧಿಸಿ, ಈ ಯೋಜನೆಯನ್ನು ತಡೆಯಡಿಯಬೇಕೆಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ ಅವರು ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ ಮತ್ತು ಮಹಾನಗರ ಪಾಲಿಕೆ ಮಹಾಪೌರರಿಗೆ ಮನವಿ ಮೂಲಕ ಕೋರಿದ್ದಾರೆ.
ಬೆಳಗಾವಿ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸವದತ್ತಿ ಬಳಿ ನಿರ್ಮಿಸಲಾದ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಆರಂಭವಾದ ನಂತರ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಆದಾಗ್ಯೂ ಸಹ ಈ ಯೋಜನೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಅವಳಿ ನಗರಗಳನ್ನು ಬಿಟ್ಟೂ ಧಾರವಾಡ ಜಿಲ್ಲೆಯ ಅನೇಕ ಪ್ರದೇಶಗಳಿಗೂ ಸಹ ನವಿಲುತೀರ್ಥ ಜಲಾಶಯದಿಂದಲೇ ನೀರನ್ನು ಒಯ್ಯಲಾಗುತ್ತಿದೆ. ಈ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಸವದತ್ತಿ ಬಳಿ ನೀರೆತ್ತುವ ಯಂತ್ರೋಪಕರಣಗಳನ್ನೂ ಸಹ ಅಳವಡಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿರ್ಣಯ ಕೈಕೊಂಡಿದೆ. ಬೆಳಗಾವಿ ಜಿಲ್ಲೆಯ ಯಾವುದೇ ಸಂಸ್ಥೆಯ, ಸಗರಸಭೆಗಳ ಪೂರ್ವಾನುಮತಿ ಪಡೆಯದೇ ನಿರ್ಣಯಗಳನ್ನು ಅಂಗೀಕರಿಸಿ ಜಾರಿಗೊಳಿಸಲಾಗುತ್ತಿದೆ.
ಮಾನವಿಯತೆಯ ದೃಷ್ಠಿಯಿಂದ ನವಿಲುತೀರ್ಥ ಜಲಾಶಯದಿಂದ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಅವಳಿ ನಗರಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳ, ಚುನಾಯಿತ ಪ್ರತಿನಿಧಿಗಳ ದೂರದೃಷ್ಟಿಯ ಕೊರತೆಯ ದುರ್ಲಾಭವನ್ನು ಪಡೆದುಕೊಳ್ಳಲು ಮುಂದಾಗಿರುವ ಹುಬ್ಬಳ್ಳಿ ಧಾರವಾಡದ ರಾಜಕಾರಣಿಗಳು ಈಗ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಗಳಿಗೂ ನೀರನ್ನು ಒಯ್ಯುವ ಸಾಹಸಕ್ಕೆ ಕೈ ಹಾಕಿರುವದು ಹಿಡ್ಕಲ್ ಜಲಾಶಯದ ಫಲಾನುಭವಿಗಳ ತೀವ್ರ ವಿರೋಧ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವದು ಸಹಜ ಪ್ರತಿಕ್ರಿಯೆ ಆಗಿದೆ. ಬೆಳಗಾವಿ ಮಹಾನಗರಕ್ಕೆ ಹಾಗೂ ಅನೇಕ ಗ್ರಾಮಗಳಿಗೆ ಹಿಡ್ಕಲ್ ಜಲಾಶಯದಿಂದ ನಿತ್ಯವೂ ನೀರು ಪೂರೈಕೆಯಾಗುತ್ತಿದೆ. ಕೈಗಾರಿಕೆ ಉದ್ದೇಶಕ್ಕಾಗಿ ಹುಬ್ಬಳ್ಳಿ ಧಾರವಾಡಗಳಿಗೆ ನೀರು ಕೊಂಡೊಯ್ಯುವ ಯೋಜನೆ ಜಾರಿಯಾದಲ್ಲಿ ಬೆಳಗಾವಿ ಸಹಿತ ಜಿಲ್ಲೆಯ ಅನೇಕ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ.
ಈ ಯೋಜನೆಯನ್ನು ಜಾರಿಗೊಳಿಸದಂತೆ ಬೆಳಗಾವಿ ಜಿಲ್ಲಾ ಉಸ್ತವಾರಿ ಸಚವರು, ಬೆಳಗಾವಿ ಲೋಕಸಭಾ ಸದಸ್ಯರು ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕು. ಯೋಜನೆಯನ್ನು ಕೂಡಲೇ ನಿಲ್ಲಿಸಲು ಒತ್ತಾಯಿಸಿ ಬೆಳಗಾವಿ ಮಹಾನಗರ ಪಾಲಿಕೆಯು ನಿರ್ಣಯವೊಂದನ್ನು ಅಂಗೀಕರಿಸಬೇಕು. ಯೋಜನೆ ಜಾರಿಯಾದ ನಂತರ ಎದುರಾಗುವ ಸಮಸ್ಯೆಗಳನ್ನು ರಾಜ್ಯ ಸರಕಾರದ ಗಮನಕ್ಕೆ ತರಬೇಕು. ಇಲ್ಲವಾದರೆ ಕುಡಿಯುವ ನೀರಿನ ಫಲಾನುಭವಿಗಳ ಪ್ರದೇಶಗಳ ಜನರು ಬೀದಿ ಹೋರಾಟಕ್ಕೆ ಇಳಿಯುವದು ಅನಿವಾರ್ಯವಾಗುತ್ತದೆ ಎಂದು ಅಶೋಕ ಚಂದರಗಿ ಅವರು ಎಚ್ಚರಿಸಿದ್ದಾರೆ.