ಮುಂಬೈ ಕನ್ನಡಿಗರ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು, ಏ.24,ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಸುಮಾರು 40 ಲಕ್ಷಕ್ಕೂ ಮಿಕ್ಕಿ ಇರುವ ಮುಂಬೈ ಕನ್ನಡಿಗರು ಸಂಕಷ್ಟಕ್ಕೊಳಗಾಗಿದ್ದು, ಅವರ ರಕ್ಷಣೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಒತ್ತಾಯಿಸಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು,  ಕರಾವಳಿ ಜಿಲ್ಲೆಗಳೂ ಸೇರಿದಂತೆ ಕರ್ನಾಟಕಕ್ಕೆ ಬರಲು ಅವಕಾಶ ಕೊಡುವಂತೆ ಕೋರಿ, ಸಂಕಷ್ಟದಲ್ಲಿರುವ ಗರ್ಭಿಣಿಯರು, ವೃದ್ಧರು, ಮಕ್ಕಳು ಸೇರಿದಂತೆ ಮಾನಸಿಕವಾಗಿ ಆತಂಕಗೊಂಡವರು ಅಪಾರ ಸಂಖ್ಯೆಯಲ್ಲಿದ್ದಾರೆ. ಅನೇಕರು ತಮ್ಮ ದೂರುಗಳಲ್ಲಿ, ನಮ್ಮ ಆಹಾರ ಖಾಲಿಯಾಗಿದೆ. ಅಲ್ಲಿನ ಸರ್ಕಾರ ನಮ್ಮನ್ನು ಗುರುತಿಸುತ್ತಿಲ್ಲ. ಕುಡಿಯಲು ನೀರಿಲ್ಲ. ನಮ್ಮ ಕೈಯಲ್ಲಿನ ಹಣಕಾಸು ಮುಗಿದಿದೆ. ಸುತ್ತಲೂ ಹಬ್ಬರುತ್ತಿರುವ ಕೊರೋನಾದಿಂದಾಗಿ ಆತಂಕ ಮತ್ತು ಖಿನ್ನತೆಗೊಳಗಾಗಿದ್ದೇವೆ. ನಮ್ಮನ್ನು ಕರ್ನಾಟಕ ಸರ್ಕಾರ ರಕ್ಷಿಸಬೇಕು ಎಂದು ವಿನಂತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಮುಂಬೈ ಕನ್ನಡಿಗರೂ ಸೇರಿದಂತೆ ರಾಷ್ಟ್ರದ್ಯಂತ ಇರುವ ಕರ್ನಾಟಕದ ಜನರ ರಕ್ಷಣೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ತುರ್ತಾಗಿ ಅವರ ಅಹವಾಲುಗಳನ್ನು ಕೇಳಲು ಟೋಲ್‌ ಫ್ರೀ ನಂಬರನ್ನು ರಾಜ್ಯಮಟ್ಟದಲ್ಲಿ ಸ್ಥಾಪಿಸಿ, ಬಂದ ದೂರುಗಳನ್ನು ಗಮನಿಸಿ ಆಯಾಯ ರಾಜ್ಯಗಳ ವ್ಯಾಪ್ತಿಯ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿ ಸಂತ್ರಸ್ತ ಕನ್ನಡಿಗರಿಗೆ ತುರ್ತು ಆಹಾರ  ಸಾಮಾಗ್ರಿಗಳು, ಔಷಧಗಳು ಮತ್ತು ಭದ್ರತಾ ವ್ಯವಸ್ಥೆ ಮಾಡುವುದಲ್ಲದೆ, ಗರ್ಭಿಣಿ ಮತ್ತು ಹೆತ್ತವರಿಂದ ದೂರವಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಂತಾರಾಜ್ಯ ಗಡಿ, ಭದ್ರತೆ ವಿಚಾರ ಗಮನದಲ್ಲಿಟ್ಟುಕೊಂಡು ಕನ್ನಡಿಗರಿಗೆ ರಕ್ಷಣೆ ನೀಡಲು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.