ಬೆಂಗಳೂರು, ಏ.28,ಕೊರೊನಾ ಸೋಂಕು ನಿಯಂತ್ರಿಸಲು ಜಾರಿಯಾಗಿದ್ದ ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 973 ವಾಹನಗಳನ್ನು ಸೋಮವಾರ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇತ್ತೀಚೆಗೆ ರಾಜ್ಯ ಸರ್ಕಾರ ಲಾಕ್ ಡೌನ್ ನಲ್ಲಿ ಕೊಂಚ ಸಡಿಲಿಕೆ ನೀಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಯಾವುದೇ ಪಾಸ್ ಇಲ್ಲದೇ, ಸುಖಾಸುಮ್ಮನೆ ರಸ್ತೆಗಿಳಿದಿದ್ದ 973 ವಾಹನಗಳನ್ನು ಸೋಮವಾರ ಒಂದೇ ದಿನ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಲಾಕ್ ಡೌನ್ ಜಾರಿಯಾಗಿದ್ದನಿಂದ ಇಂದಿನವರೆಗೆ ಸಿಲಿಕಾನ್ ಸಿಟಿಯಲ್ಲಿ 46,673 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಸಾರ್ವಜನಿಕರಿಗೆ ಮನೆಯಲ್ಲೇ ಇರಬೇಕು ಎಂದು ಸರ್ಕಾರ ಸೂಚಿಸಿದೆ. ಇನ್ನು ಪೊಲೀಸರು ಕೇವಲ ಲಾಕ್ ಡೌನ್ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಿರದೇ, ಕೊರೊನಾ ಕುರಿತು ಸಾರ್ವಜನಿಕರಿಗೆ ಜಾದೂ, ಅಣುಕು ಪ್ರದರ್ಶನ, ನೃತ್ಯ, ಹಾಡು ಹೇಳುವ ಮೂಲಕ ವಿವಿಧ ಬಗೆಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ, ಜನರು ಸುಖಾಸುಮ್ಮನೆ ರಸ್ತೆಗೆ ಇಳಿಯುತ್ತಿರುವುದು ಮಾತ್ರ ಕಡಿಮೆ ಆಗುತ್ತಿಲ್ಲ. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ವಾಹನಗಳನ್ನು ಚಾಲಕರಿಗೆ ಲಾಕ್ ಡೌನ್ ಮುಕ್ತಾಯಗೊಂಡ ನಂತರವೇ ಹಿಂದಿರುಗಿಸಲಿದ್ದಾರೆ. ಇನ್ನು, ವಾಹನ ಸವಾರರು ಕೋರ್ಟ್ ಮೂಲಕವೇ ವಾಹನವನ್ನು ವಾಪಸ್ಸು ಪಡೆದುಕೊಳ್ಳಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ