ಬೆಂಗಳೂರು, ಏ 20,ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾನೂನು ಜಾರಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಪಾದರಾಯನಪುರ ಸೇರಿದಂತೆ ರಾಜ್ಯದ ವಿವಿಧೆಡೆ ವೈದ್ಯರು, ಆಶಾ ಕಾರ್ಯಕರ್ತರು, ಅಧಿಕಾರಿಗಳ ವಿರುದ್ಧ ಹಲ್ಲೆ ಪ್ರಕರಣ ಹೆಚ್ಚುತ್ತಿರುವುದರಿಂದ ಸರ್ಕಾರ ಇದೀಗ ಬಿಗಿ ನಿಲುವು ತಳೆದಿದೆ. ಶೀಘ್ರದಲ್ಲೇ ಸುಗ್ರಿವಾಜ್ಞೆ ಹೊರಡಿಸಿ ಇದಕ್ಕೆ ಕಾನೂನು ಸ್ಪರೂಪ ನೀಡಲಾಗುವುದು ಎಂದರು.
ಇಂದು ನಡೆದ ಸಂಪುಟ ಸಭೆಯಲ್ಲಿ ಕೇರಳ ಮತ್ತು ಉತ್ತರ ಪ್ರದೇಶ ಮಾದರಿ ರಾಜ್ಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಆಶಾ ಕಾರ್ಯಕರ್ತರು, ವೈದ್ಯರು, ಅಧಿಕಾರಿಗಳ ಮೇಲೆ ಹಲ್ಲೆ, ಉದ್ದೇಶಪೂರ್ವಕವಾಗಿ ಸೋಂಕು ಹಬ್ಬಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.ಈ ಹಿಂದೆ ನಿರ್ಧರಿಸಲಾಗಿದ್ದ ವಿವಿಧ ವಲಯಗಳಲ್ಲಿ ಪೊಲೀಸರು ದಾಖಲಿಸಿದ್ದ 46 ಪ್ರಕರಣಗಳನ್ನು ಹಿಂಪಡೆಯಲು ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಟಿಪ್ಪು ಗಲಾಟೆ, ಕನ್ನಡ ಪರ ಹೋರಾಟಗಾರರು, ಕಾವೇರಿ, ರೈತರ ಗಲಾಟೆಯಲ್ಲಿ ಭಾಗಿಯಾದವರ ವಿರುದ್ಧದ 152 ಪ್ರಕರಣವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಂಪುಟದ ಇತರ ಪ್ರಮುಖ ತೀರ್ಮಾನಗಳು: ಸನ್ನಡತೆ ಆಧಾರದಲ್ಲಿ ಖೈದಿಗಳ ಅವಧಿಪೂರ್ವ ಬಿಡುಗಡೆ ಸಂಬಂಧ ನಿಯಮ ತಿದ್ದುಪಡಿಗೆ ತೀರ್ಮಾನಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯೂ ಮೂರು ತಿಂಗಳು ಉಚಿತ ಅನಿಲ ಸಿಲಿಂಡರ್ ಸರಬರಾಜು ಮಾಡಲು ತೀರ್ಮಾನ. ಸುಮಾರು ಒಂದು ಲಕ್ಷ ಜನರಿಗೆ ಇದರಿಂದ ಸಹಾಯವಾಗಲಿದೆ. ಚಿಕ್ಕಮಗಳೂರಿಗೆ 438.75 ಕೋಟಿ ರೂ. ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಅಸ್ತು- ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸಿಬ್ಬಂದಿಗೆ ಏಳನೇ ವೇತನ ಆಯೋಗದಡಿ ಪರಿಷ್ಕೃತ ವೇತನ ನೀಡಲು ತೀರ್ಮಾನ. 2800 ಸಿಬ್ಬಂದಿ ಪರಿಷ್ಕೃತ ವೇತನ ಕೊಡಲು ತೀರ್ಮಾನ. 137.57 ಕೋಟಿ ರೂ. ಹೆಚ್ಚುವರಿ ಹೊರೆ. ಲಾಕ್ ಡೌನ್ ಮೇ 3 ರವರೆಗೆ ವಿಸ್ತರಣೆಗೆ ತೀರ್ಮಾನ. ಕೇಂದ್ರದ ಮಾರ್ಗಸೂಚಿಯನ್ವಯ ಕೆಲ ಸಡಿಲಿಕೆ ಮಾಡಲು ಮೂರು ದಿನಗಳಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ಕರೆದು ನಿರ್ಧಾರ. ಸದ್ಯ ಲಾಕ್ ಡೌನ್ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಗಿದೆ.