ಬೆಂಗಳೂರು, ಮೇ 3, ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ಕೊರೊನಾ ನಿಧಿಯಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಒಂದು ಕೋಟಿ ರೂ.ನೀಡಿದೆ.ರಾಜ್ಯ ಸರಕಾರದ ಅದೇಶಕ್ಕನುಗುಣವಾಗಿ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಪ್ರಯಾಣಿಕರು ವಲಸೆ ಕಾರ್ಮಿಕರು ತಮ್ಮ ಊರು ತಲುಪಲಾಗದೆ ಇನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಮಕ್ಕಳು , ಮಹಿಳೆಯರು , ವೃದ್ಧರು ಸೇರಿ ಅನೇಕ ಮಂದಿ ಊಟ , ತಿಂಡಿ , ಬಸ್ ವ್ಯವಸ್ಥೆ ಇಲ್ಲದೆ ರಾಜ್ಯದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಅನಾಥ ಭಾವದಿಂದ ನರಳುತ್ತಿರುವುದನ್ನು ತಾವು ಖುದ್ದಾಗಿ ಪರಿಶೀಲಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜಸ್ತಾನ , ತೆಲಂಗಾಣ, ದಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳು ಪ್ರಯಾಣಿಕರು ತಮ್ಮ ಊರು ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ. ಪ್ರಜೆಗಳ ಬಗ್ಗೆ ಆ ಸರಕಾರಗಳಿಗಿರುವ ಕಾಳಜಿ ಕರ್ನಾಟಕ ಸರಕಾರಕ್ಕೆ ಇಲ್ಲ ಎಂದು ಸೂಚ್ಯವಾಗಿ ಶಿವಕುಮಾರ್ ತಿವಿದಿದ್ದಾರೆ.ಸರಕಾರಕ್ಕೆ ತೀವ್ರ ಹಣಕಾಸಿನ ತೊಂದರೆಯಿಂದಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಪ್ರಯಾಣಿಕರ ಯೋಗಕ್ಷೇಮದ ಬಗ್ಗೆ ಚಿಂತಿಸಿಲ್ಲ. ಹೀಗಾಗಿ ಪಕ್ಷದ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು " ಕೊರೊನಾ ಕಾಂಗ್ರೆಸ್ ಪರಿಹಾರ ನಿಧಿ ' ಗೆ ದೇಣಿಗೆಯಾಗಿ ನೀಡಿರುವ ಹಣದಲ್ಲಿ 1 ಕೋಟಿ ರುಪಾಯಿಯನ್ನು ಚೆಕ್ ಮೂಲಕ ರಾಜ್ಯ ಸಾರಿಗೆ ಸಂಸ್ಥೆಗೆ ನೀಡುತ್ತಿರುವುದಾಗಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರಿಗೆ ಶಿವಕುಮಾರ್ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ
ರಾಜ್ಯದ ಪ್ರಯಾಣಿಕರಿಂದ ನಯಾಪೈಸೆ ತೆಗೆದುಕೊಳ್ಳದೇ ಅವರನ್ನು ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಒಂದು ಬಾರಿಗೆ ಉಚಿತವಾಗಿ ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಇನ್ನೂ ಏನಾದರೂ ಹಣದ ಕೊರತೆಯಿದ್ದರೆ ಅದನ್ನು ಪಕ್ಷದ ಗಮನಕ್ಕೆ ತಂದಲ್ಲಿ ಅದನ್ನೂ ಕೆಪಿಸಿಸಿಯೇ ಭರಿಸುತ್ತದೆ. ಪ್ರಜೆಗಳ ಕ್ಷೇಮವೇ ನಮ್ಮ ಪರಮ ಕರ್ತವ್ಯ ಎಂದು ಶಿವಕುಮಾರ್ ಪರೋಕ್ಷವಾಗಿ ಸರ್ಕಾರವನ್ನು ತಿವಿದಿದ್ದಾರೆ.