ರಾಜ್ಯದಲ್ಲಿ ಶೇ.94 ರಷ್ಟು ಪಡಿತರ ವಿತರಣೆ- ಸಚಿವ ಕೆ.ಗೋಪಾಲಯ್ಯ

ಮೈಸೂರು,  ಮೇ 2,ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಲಾದ  ಲಾಕ್‍ಡೌನ್ ಕ್ರಮದಿಂದಾಗಿ ಉದ್ಯೋಗವಿಲ್ಲದೆ ಸಮಸ್ಯೆಗೊಳಗಾದ ರಾಜ್ಯದಲ್ಲಿನ ಶೇ.94 ರಷ್ಟು  ಪಡಿತರ ಚೀಟಿದಾರಿಗೆ ಪಡಿತರವನ್ನು ವಿತರಿಸಲಾಗಿದೆ ಎಂದು ಆಹಾರ, ನಾಗರಿಕರ ಹಾಗೂ  ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ದೊರಕುವ ಪಡಿತರವನ್ನು ಆಯಾ  ಜಿಲ್ಲಾಡಳಿತದ ಮುಖೇನ ಎಲ್ಲಾ ಜನಸಾಮಾನ್ಯರಿಗೂ ಪಡಿತರ ತಲುಪಿಸುವ ಕೆಲಸ ಮಾಡಲಾಗಿದೆ ಎಂದು  ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿರುವ 1,011  ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಿ ಬಡ  ಕುಟುಂಬಗಳಿಗೆ ಪಡಿತರ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಂಗಡಿಗಳಲ್ಲಿ ಇತರೆ  ವಸ್ತುಗಳನ್ನು ಮಾರಾಟ ಹಾಗೂ ಅವ್ಯವಹಾರ ಕಂಡುಬಂದರೆ ತಕ್ಷಣ ಸೂಕ್ತ ಕಾನೂನು ಕ್ರಮ  ಜರಗಿಸಬೇಕು ಎಂದು ಸೂಚಿಸಿದರು.ಬಡವರಿಗೆ ವಿತರಿಸುವ ಪಡಿತರದ  ದಾನ್ಯಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾಯಬೇಕು. ಕಳಪೆ ಗುಣಮಟ್ಟ ಕಂಡುಬರುವ  ಧಾನ್ಯಗಳನ್ನು ನಿಗಧಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ದಾನ್ಯ ದೊರಕುವಂತೆ ಕ್ರಮ  ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳ ಅನಿಲ ಭಾಗ್ಯ  ಯೋಜನೆ ಅಡಿಯಲ್ಲಿ 98 ಸಾವಿರ ಕುಟುಂಬಗಳಿಗೆ ಉಚಿತ ಗ್ಯಾಸ್ ವಿತರಿಸಲು ರಾಜ್ಯ ಸರ್ಕಾರ  ನಿರ್ಧರಿಸಿದೆ. ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಫಲಾನುಭವಿಗಳಿಗೆ ತಲುಪುವಂತೆ  ನೋಡಿಕೊಳ್ಳಲಾಗುವುದು ಎಂದು ಹೇಳಿದರು.ಉತ್ತಮ  ಗುಣಮಟ್ಟದಿಂದ ಕೂಡಿದ ರಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.  ಖರೀದಿಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕತೆ ಕಾಯ್ದುಕೊಂಡು ಶುದ್ಧವಾದ ರಾಗಿ  ಖರೀದಿಸಿ ಜನರಿಗೆ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.ರಾಜ್ಯದ  ಪ್ರತಿ ಗ್ರಾಮಗಳಲ್ಲಿ ಮೂರು ಕಿ.ಮೀ ಗಿಂತ ಹೆಚ್ಚು ನ್ಯಾಯಬೆಲೆ ಅಂಗಡಿಗಳು ದೂರವಿದ್ದರೆ,  ಆಯಾ ಗ್ರಾಮಗಳ ಶಾಲೆಗಳಲ್ಲಿ ಪಡಿತರ ವಿತರಿಸುವಂತೆ ಅಧಿಕಾರಿಗಳು ಕೂಡಲೇ ಮುಂದಾಗಬೇಕು  ಎಂದು ಹೇಳಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ  ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್ ಎಲ್.ನಾಗೇಂದ್ರ,  ಬಿ.ಹರ್ಷವರ್ಧನ್, ಎಂ.ಅಶ್ವಿನ್‍ಕುಮಾರ್, ಸಿ.ಅನಿಲ್ ಚಿಕ್ಕಮಾದು, ಕೆ.ಮಹದೇವು,  ಎಚ್.ಪಿ.ವೆಂಕಟೇಶ್, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಧರ್ಮಸೇನ, ಜಿಲ್ಲಾ  ಪಂಚಾಯತ್ ಅಧ್ಯಕ್ಷರಾದ ಬಿ.ಸಿ. ಪರಿಮಳ ಶ್ಯಾಂ, ಮೇಯರ್ ತಸ್ನಿಂ, ಜಿಲ್ಲಾಧಿಕಾರಿ  ಅಭಿರಾಮ್.ಜಿ. ಶಂಕರ್, ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಮಹಾ ನಗರ  ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಇತರರು ಉಪಸ್ಥಿತರಿದ್ದರು.