ನವದೆಹಲಿ, ಸೆ 16 ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನಕ್ಕೆ 60 ವರ್ಷ ಪೂರ್ಣಗೊಂಡ ನೆನಪಿಗಾಗಿ ಸೋಮವಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.
ದೂರದರ್ಶನದ 60ನೇ ವರ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೂರದರ್ಶನದ ಸುದ್ದಿ ನಿಖರವಾಗಿದ್ದು, ಯಾವುದೇ ಭಾವನೆಗಳನ್ನು ಕೆದಕುವ ವಿಷಯಗಳಿರುವುದಿಲ್ಲ ಎಂದು ಹೇಳಿದರು.
ಯಾವುದೇ ಭಾವನೆಗಳನ್ನು ಉದ್ರಿಕ್ತಗೊಳಿಸದೆ ನಿಖರವಾದ ಮತ್ತು ಅತಿ ವೇಗವಾಗಿ ಸುದ್ದಿ ಕೊಡುತ್ತಿರುವುದು ಸಾರ್ವಜನಿಕ ಪ್ರಸಾರ ಸಂಸ್ಥೆಯ ಮುಖ್ಯ ಸಾಧನೆಯಾಗಿದೆ ಎಂದು ಜಾವಡೇಕರ್ ಹೇಳಿದರು.
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದೂರದರ್ಶನ ಮಹಾನಿರ್ದೇಶಕರಾದ ಸುಪ್ರಿಯಾ ಸಾಹು ಕಳೆದ ಕೆಲವು ವರ್ಷಗಳಲ್ಲಿ ದೂರದರ್ಶನ ಮಾಡಿದ ಸಾಧನೆಗಳನ್ನು ವಿವರಿಸಿದರು.
1959 ಸೆಪ್ಟೆಂಬರ್ 15ರಂದು ಸ್ಥಾಪನೆಯಾದ ಸ್ಟುಡಿಯೋ ಮತ್ತು ಟ್ರಾನ್ಸ್ ಮಿಟರ್ ಮೂಲಸೌಕರ್ಯದ ದೃಷ್ಟಿಯಿಂದ ದೂರದರ್ಶನವು ಭಾರತದ ಅತಿದೊಡ್ಡ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿದೆ.