ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ
Signature collection campaign demanding the filling of all vacant posts in the central and state go
ಧಾರವಾಡ 12 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ನೇಮಕಾತಿಯಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರಟಿಕ್ ಯೂಥ್ ಆರ್ಗನೈಸೇಶನ್ (ಎಐಡಿವೈಓ) ದೇಶವ್ಯಾಪಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಯುವಜನರಿಂದ ಸಂಗ್ರಹಿಸಲಾದ ಸಹಿಗಳನ್ನು ಇಂದು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಯಿತು.ಕೇಂದ್ರ ಸರ್ಕಾರದ 78 ಸಚಿವಾಲಯಗಳಲ್ಲಿ ಖಾಲಿಯಿರುವ 9.79 ಲಕ್ಷ ಹುದ್ದೆಗಳ ಭರ್ತಿಗೆ ಹಾಗೂ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಆಗ್ರಹಿಸಿ ಕಳೆದ 4-5 ತಿಂಗಳಿಂದ ಜಿಲ್ಲೆಯಾದ್ಯಂತ ಯುವಜನರಿಂದ ಸಹಿ ಸಂಗ್ರಹಿಸಲಾಗಿತ್ತು.
ದೇಶದಾದ್ಯಂತ ಸಂಗ್ರಹಿಸಿದ ಸಹಿಗಳನ್ನು ಸರ್ಕಾರಕ್ಕೆ ಸಲ್ಲಿಸಲು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಶೀಘ್ರ ನೇಮಕಾತಿಗೆ ಆಗ್ರಹಿಸಿ ಇದೇ ಏಪ್ರಿಲ್ 11ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಯುವ ಮಹಾಪಂಚಾಯತ್ ಹಮ್ಮಿಕೊಳ್ಳಲಾಗಿದೆ.ದೇಶದಲ್ಲಿ ಬೃಹತ್ ಸಂಖ್ಯೆಯ ಉದ್ಯೋಗದಾತ ಸಂಸ್ಥೆಗಳಾದ ಬ್ಯಾಂಕ್, ರೈಲ್ವೆ, ಎಲ್‌ಐಸಿ ಮುಂತಾದ ಇಲಾಖೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿಗಳು ಆಗದೇ ಬಹಳ ವರ್ಷಗಳೇ ಕಳೆದಿವೆ. ಈ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಪದ್ಧತಿಯನ್ನು ಅಳವಡಿಸುತ್ತಾ ಖಾಯಂ ಹುದ್ದೆಗಳ ಭರ್ತಿಯನ್ನೇ ನಿಲ್ಲಿಸಲಾಗಿದೆ. ಇನ್ನೊಂದೆಡೆ ಈ ಸಂಸ್ಥೆಗಳನ್ನು ಕ್ರಮೇಣವಾಗಿ ಖಾಸಗೀಕರಣಕ್ಕೆ ಒಳಪಡಿಸಲಾಗುತ್ತಿದೆ. ಇದರಿಂದ ಮತ್ತಷ್ಟು ಉದ್ಯೋಗ ಕಡಿತ ಉಂಟಾಗುತ್ತದೆ. ಬಹಳ ಕಷ್ಟಪಟ್ಟು, ಸಾಲ ಮಾಡಿಕೊಂಡು ತರಬೇತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಯುವಜನತೆ ನೇಮಕಾತಿ ನಡೆಯದೇ ಇರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.
ಎಷ್ಟೋ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2023ರ ಅಂಕಿ ಸಂಖ್ಯೆಯ ಪ್ರಕಾರ ದೇಶದಲ್ಲಿ 10,786 ರೈತರು ಆತ್ಮಹತ್ಯೆಗೆ ಶರಣಾದರೆ ಅದೇ ವರ್ಷದಲ್ಲಿ 14,234 ನಿರುದ್ಯೋಗಿ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಕೋವಿಡ್ ಕಾರಣವನ್ನು ಮುಂದಿಟ್ಟುಕೊಂಡು ನೇಮಕಾತಿಗಳ ಮೇಲೆ ನಿರ್ಬಂಧ ವಿಧಿಸಿತ್ತು. ಹಾಗೆಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳ ಭರ್ತಿ ಮಾಡುವುದಾಗಿ ಯುವಜನತೆಗೆ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಎರಡು ಮುಕ್ಕಾಲು ವರ್ಷ ಪೂರ್ಣಗೊಂಡಿದೆ.
ಆದರೂ ಕೂಡ ಮೀಸಲಾತಿ - ಒಳ ಮೀಸಲಾತಿಯ ನೆಪ ನೀಡುತ್ತಾ, ನೇಮಕಾತಿಗಳನ್ನು ಮಾಡದೆ ಸಮಯ ತಳ್ಳುತ್ತಿದೆ. ಹಾಗಾಗಿ ಯುವಜನರು ಕಳೆದ ಐದಾರು ತಿಂಗಳಿಂದ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಮ್ಮ ಉದ್ಯೋಗದ ಹಕ್ಕಿಗಾಗಿ ನಿರಂತರವಾದ ಹೋರಾಟ ನಡೆಸಿದ್ದಾರೆ.ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 58 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ವಿಶೇಷ ಶಿಕ್ಷಕರಾದ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಕರನ್ನು ಕೇಳುವುದೇ ಬೇಡವೆನ್ನುವಂತಾಗಿದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಇದರ ನಡುವೆಯೇ ರಾಜ್ಯ ಸರ್ಕಾರವು ಜಾರಿಗೊಳಿಸಿದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಹೇಳಿ ಹಳ್ಳಿಗಳ ಶಾಲೆಗಳನ್ನು ವೀಲೀನಗೊಳಿಸುವ ಪ್ರಕ್ರಿಯೆಯೂ ಕೂಡ ಮತ್ತಷ್ಟು ಶಿಕ್ಷಕರ ಹುದ್ದೆಗಳನ್ನು ನಾಶ ಮಾಡುತ್ತದೆ.
ಒಂದು ಕಡೆ ಹಳ್ಳಿಗಳ ಬಡ ಹಿಂದುಳಿದ ರೈತ, ಕೃಷಿ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣದ ಹಕ್ಕನ್ನು ನಾಶ ಮಾಡಿದರೆ, ಇನ್ನೊಂದೆಡೆ ಹುದ್ದೆಗಳನ್ನು ನಾಶ ಮಾಡಿದಂತಾಗುತ್ತದೆ. ಆದ್ದರಿಂದ ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೀತಿಯನ್ನು ಕೈಬಿಟ್ಟು ಸರ್ಕಾರಿ ಶಾಲೆಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕು.ರಾಜ್ಯದಲ್ಲಿ, ಅಲ್ಪ ಸ್ವಲ್ಪ ನಡೆಯುವ ನೇಮಕಾತಿಗೆ ದುಬಾರಿಯಾದ ಅರ್ಜಿ ಶುಲ್ಕಗಳನ್ನು ನಿಗದಿ ಮಾಡಲಾಗುತ್ತಿದೆ. ಈಗಾಗಲೇ ನಿರುದ್ಯೋಗದಿಂದ ಜರ್ಝರಿತರಾದ ಯುವಜನತೆ ಈ ರೀತಿ ಅರ್ಜಿ ಶುಲ್ಕವನ್ನು ಭರಿಸಲು ಹೆಣಗಾಡಬೇಕಾಗಿದೆ.
ಇನ್ನೊಂದೆಡೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು, ಸಂದರ್ಶನಕ್ಕೆ ಒಂದು ಊರಿಂದ ಇನ್ನೊಂದು ಊರಿಗೆ ತೆರಳಲು ಕೂಡ ಸಾವಿರಾರು ರೂಪಾಯಿಗಳ ಹಣವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಮತ್ತೆ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಅರ್ಜಿ ಶುಲ್ಕ ನಿಗದಿ ಮಾಡುವುದು ನ್ಯಾಯವಾದ ಕ್ರಮವಾಗುವುದಿಲ್ಲ. ಆದ್ದರಿಂದ ಅರ್ಜಿ ಶುಲ್ಕಗಳನ್ನು ಸಂಪೂರ್ಣವಾಗಿ ಕೈ ಬಿಡಬೇಕು ಹಾಗೂ ಪರೀಕ್ಷೆ ಮತ್ತು ಸಂದರ್ಶನಗಳಿಗೆ ತೆರಳಲು ಅಭ್ಯರ್ಥಿಗಳಿಗೆ ಉಚಿತವಾಗಿ ರೈಲ್ವೆ ಮತ್ತು ಬಸ್ಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ನೀತಿಯನ್ನು ಕೈಬಿಟ್ಟು ಖಾಯಂ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ತುರ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.ನಿಯೋಗದಲ್ಲಿ ಎಐಡಿವೈಓ ಜಿಲ್ಲಾಧ್ಯಕ್ಷರಾದ ಭವಾನಿ ಶಂಕರ್ ಎಸ್ ಗೌಡ, ಜಿಲ್ಲಾ ಉಪಾಧ್ಯಕ್ಷರಾದ ಅಕ್ಷಯ್ ತಳಕಲ್, ಯಲ್ಲಪ್ಪ ದೊರೆ, ಸಿದ್ದರಾಮ ಬಿಜ್ಜರಗಿ, ನೌಮನ್ ನದಾಫ್ ಭಾಗವಹಿದ್ದರು.
ಹಕ್ಕೊತ್ತಾಯಗಳು:1.ಕೇಂದ್ರ ಸರ್ಕಾರದ 78 ಸಚಿವಾಲಯಗಳಲ್ಲಿ ಖಾಲಿಯಿರುವ 9.79 ಲಕ್ಷ ಹುದ್ದೆಗಳು ಹಾಗೂ ರಾಜ್ಯದ 43 ಇಲಾಖೆಗಳಲ್ಲಿ ಖಾಲಿ ಇರುವ 2,84,881 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. 2.ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. 3.ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು ಹಾಗೂ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. 4.ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು ಮತ್ತು ಎಲ್ಲಾ ಹುದ್ದೆಗಳಿಗೂ ಖಾಯಂ ನೇಮಕಾತಿಯನ್ನು ಮಾಡಬೇಕು.
5.ದೇಶಾದ್ಯಂತ ಗಿಗ್ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ಕನಿಷ್ಠ ವೇತನ ಜಾರಿಗೊಳಿಸಿ, ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಬೇಕು. 6.ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ನೀತಿಯನ್ನು ರದ್ದುಗೊಳಿಸಬೇಕು.7.ಕೆಪಿಎಸ್ಸಿಯ ಸ್ವಚ್ಛಗೊಳಿಸಲು ರಾಜ್ಯ ಸರ್ಕಾರ ಹೋಟಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. 8.ಬಡಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ ಹಾಗೂ ಶಿಕ್ಷಕ ಹುದ್ದೆಗಳನ್ನು ನಾಶಗೊಳಿಸುವ ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೀತಿಯನ್ನು ಕೈಬಿಟ್ಟು, ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು.
9.ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿ ಅವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ಹಾಗೂ ಸರ್ಕಾರಿ ಗ್ರಂಥಾಲಯಗಳನ್ನು ತೆರೆಯಬೇಕು. 10.ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ಖಾನಾವಳಿಗಳು, ಉಪಹಾರ ಮಂದಿರಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಒದಗಿಸುವುದನ್ನು ಖಾತ್ರಿಪಡಿಸಲು ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ನಿಗಾ ವಹಿಸಬೇಕು. ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ, ಅಕ್ಷಯ್ ತಳಕಲ್ ಎಐಡಿವೈಓ, ಧಾರವಾಡ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 