ಮಹಿಳೆಯ ಶಕ್ತಿಯೇ ರಾಷ್ಟ್ರದ ಶಕ್ತಿ

ಮಹಿಳೆಯ ಶಕ್ತಿಯೇ ರಾಷ್ಟ್ರದ ಶಕ್ತಿ The power of a woman is the power of a nation

ಹುಲಕೋಟಿ 12 : ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದ್ದು, ಇಂದಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ಆಡಳಿತ, ಉದ್ಯಮ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆಂದು ಗದುಗಿನ ಸೌಂದರ್ಯ ತಜ್ಞೆ ಸಹನಾ ಜೋಳದ ಹೇಳಿದರು. ಅವರು ಹುಲಕೋಟಿಯ  ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕ, ಯುವ ರೆಡ್ ಕ್ರಾಸ್ ಘಟಕ, ಎನ್‌.ಎಸ್‌.ಎಸ್‌. ಘಟಕ ಜಂಟಿಯಾಗಿ ಐಕ್ಯುಎಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಮಹಿಳೆಯರು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯಿಂದ ಮುಂದೆ ಬಂದಾಗ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಘಟಕದ ಸಂಯೋಜಕಿ ಡಾ. ಸಾರಿಕಾ ಪಾಟೀಲ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಸ್ವರೂಪವನ್ನು ತಿಳಿಸುತ್ತ ಮಹಿಳೆಯರ ಸಾಧನೆ, ಸಮಾನತೆ, ಸಬಲೀಕರಣದ ಮಹತ್ವವನ್ನು ವಿವರಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ಮಹಾನಂದಾ ಹಿರೇಮಠ ಮಹಿಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮಾಜದಲ್ಲಿ ಮಹಿಳೆಯರ ಬಗ್ಗೆ ಗೌರವ, ಜಾಗೃತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವೆಂದು ಹೇಳಿದರು. ಎನ್‌.ಎಸ್‌.ಎಸ್‌. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಇತಿಹಾಸದಲ್ಲಿ ಅನೇಕ ಮಹಿಳೆಯರು ಧೈರ್ಯ, ಜ್ಞಾನ, ಸೇವೆಯ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದು, ಅವರ ಜೀವನ ಸಾಧನೆಗಳು ಮಹಿಳಾ ಸಬಲೀಕರಣಕ್ಕೆ ಶಾಶ್ವತ ಪ್ರೇರಣೆಯಾಗಿದೆ ಎಂದು ಹೇಳಿದರು. 

ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಸಮಾಜದ ಚಿಂತನೆಗಳನ್ನು ಪ್ರತಿಬಿಂಬಿಸುವ ಶಕ್ತಿಯಾಗಿರುವ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ, ಭಕ್ತಿ ಸಾಹಿತ್ಯದ ಮೂಲಕ ಸಮಾಜದ ಮೌಲ್ಯಗಳನ್ನು ಸಾರಿದ್ದಾರೆ ಎಂದು ಹೇಳಿದರು. ಐಕ್ಯುಎಸಿ ಸಂಯೋಜಕ ಡಾ. ಜಿತೇಂದ್ರ ಜಾಗೀರದಾರ ಶಿಕ್ಷಣ, ಪರಿಶ್ರಮ, ಆತ್ಮವಿಶ್ವಾಸ ಇದ್ದರೆ ಮಹಿಳೆಯರು ಯಾವ ಕ್ಷೇತ್ರದಲ್ಲಾದರೂ ಉನ್ನತ ಸಾಧನೆ ಮಾಡಬಹುದೆಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಧಾ ಕೌಜಗೇರಿ ಮಹಿಳೆಯರು ಕುಟುಂಬದಷ್ಟೆ ಸಮಾಜದ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದ್ದು, ಮಹಿಳೆಯರಿಗೆ ಗೌರವ, ಸುರಕ್ಷತೆ, ಶಿಕ್ಷಣದ ಅವಕಾಶಗಳನ್ನು ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದೆನ್ನುತ್ತ ಮಹಿಳೆಯರ ಸಬಲೀಕರಣವೇ ಸಮಾನತೆಯ ಸುಸ್ಥಿರ ಸಮಾಜ ನಿರ್ಮಾಣಕ್ಕೆ ದಾರಿ ಎಂದು ಅಭಿಪ್ರಾಯಪಟ್ಟರು. ಶ್ವೇತಾ ಪಾಲನಕರ ಗಣ್ಯಮಾನ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ಸಾವಿತ್ರಿ ಟಿ. ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.