ಶಿವಮೊಗ್ಗ, ಮೇ 2, ಮೇ 3ರ ನಂತರ ಹಸಿರು ವಲಯಗಳಲ್ಲಿ ಲಾಕ್ ಡೌನ್ ಅನ್ನು ಸಡಿಲಿಸಿರುವ ಸರ್ಕಾರ ಮೇ 4ರಿಂದ ಷರತ್ತುಗಳೊಂದಿಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದೆಂಬ ಸುದ್ದಿ ಹೊರಬೀಳುತ್ತಿದ್ದಂತೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಇತರೆ ಹಸಿರು ವಲಯಗಳಲ್ಲಿ ಅಬಕಾರಿ ಅಧಿಕಾರಿಗಳು ಬಾರ್‌ಗಳಲ್ಲಿ ಪರಿಶೀಲನೆ ಆರಂಭಿಸಿದ್ದಾರೆ.
ದಾಸ್ತಾನು ಪರಿಶೀಲಿಸುವಂತೆ ಆಯುಕ್ತರ ನಿರ್ದೇಶನ ನೀಡಿದ್ದು , ಈ ಹಿನ್ನೆಯಲ್ಲಿ ಮದ್ಯದಂಗಡಿಯಲ್ಲಿ ಇರುವ ದಾಸ್ತಾನು ಪರಿಶೀಲನೆ ನಡೆಸಲಾಗುತ್ತಿದೆ. ದಾಖಲಾಗಿರುವ ದಾಸ್ತಾನು ಪ್ರಮಾಣ ಮತ್ತು ಅಂಗಡಿಯಲ್ಲಿರುವ ದಾಸ್ತಾನು ಪ್ರಮಾಣ ಈ ಎಲ್ಲದನ್ನು ಅಧಿಕಾರಿಗಳೀಗ ಪರಿಶೀಲಿಸಲಾರಂಭಿಸಿದ್ದಾರೆ.ಬಾರ್ ಮಾಲೀಕರ ಸಮ್ಮುಖದಲ್ಲಿ ಶಿವಮೊಗ್ಗದಲ್ಲಿ ಅಬಕಾರಿ ಅಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಇನ್ನು ಏಕಕಾಲಕ್ಕೆ ಎಲ್ಲ ತಾಲೂಕುಗಳಲ್ಲೂ ಆಯಾ ವಿಭಾಗದ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.ಬಾರ್‌ಗಳಲ್ಲಿ ಸ್ಟಾಕ್ ಪರಿಶೀಲನೆ ವೇಳೆ ಅಬಕಾರಿ ಉಪ ಆಯುಕ್ತ ಅಜಿತ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಆಯುಕ್ತರ ಸೂಚನೆಯಂತೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಇದರಲ್ಲಿ ವ್ಯತ್ಯಾಸ ಕಂಡು ಬಂದರೆ ಬಾರ್ ಅಥವಾ ಬಾರ್ ಅಂಡರ್ ರೆಸ್ಟೋರೆಂಟ್‍ನ ಪರವಾನಗಿಯನ್ನೇ ರದ್ದುಪಡಿಸಲಾಗುವುದಾಗಿ ಎಚ್ಚರಿಕೆ ನೀಡಿದರು.