ರಾಮನಗರ, ಏ.19, ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಯಾವುದೇ ತೊಂದರೆಯಾಗದಂತೆ ರೈತರು ಬೆಳೆದಂತಹ ಹಣ್ಣು ಮತ್ತು ತರಕಾರಿಯನ್ನು ಮಾರಾಟ ಮಾಡಲು ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.ಜಿಲ್ಲೆಯ ಎ.ಪಿ.ಎಂ.ಸಿ ಗೆ ಭಾನುವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ರೈತರು ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸಾಗಾಣಿಕೆ ಮಾಡಲು ಚೆಕ್ ಪೋಸ್ಟ್ ಗಳಲ್ಲಿ ತೊಂದರೆಯ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಸಾಗಾಣಿಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂಬುದು ಕಂಡುಬಂದಿದೆ ಎಂದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಎ.ಪಿ.ಎಂ.ಸಿ. ಅಧ್ಯಕ್ಷರು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿರುತ್ತಾರೆ. ಬೆಳಿಗ್ಗೆ 3 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರೈತರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿರುತ್ತಾರೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಧ್ವನಿವರ್ಧಕದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯೋಜಿತ ರೂಪದಲ್ಲಿ ವಹಿವಾಟು ನಡೆಯುತ್ತಿದೆ ಎಂದರು. ರಾಜ್ಯದ ವಿವಿಧ ಎ.ಪಿ.ಎಂ.ಸಿಗಳಿಗೆ ಭೇಟಿ ನೀಡಿದಾಗ ರೈತರು ದಪ್ಪ ಮೆಣಸಿನಿಕಾಯಿ, ನಿಂಬೆಹಣ್ಣು ಸೇರಿದಂತೆ ಎರಡು ಮೂರು ತರಕಾರಿ ಮಾರಾಟ ನಿರೀಕ್ಷೆಯಂತೆ ಆಗುತ್ತಿಲ್ಲ ಎಂದು ತಿಳಿಸಿರುತ್ತಾರೆ. ಅವುಗಳ ಮಾಹಿತಿಯನ್ನು ಪಡೆಯಲಾಗಿದೆ. ರೈತರಿಗೆ ಸಹಾಯಹಸ್ತ ನೀಡಲು ಮುಂದಾಗಿರುವ ರಾಜಕಾರಣಿಗಳು, ಶಾಸಕರು ಹಾಗೂ ಇನ್ನಿತರ ಸಮಾಜ ಸೇವಕರಿಗೆ ಮಾಹಿತಿ ನೀಡಿ ಅವುಗಳನ್ನು ರೈತರಿಂದ ಖರೀದಿಸುವ ಕೆಲಸ ಸಹ ಮಾಡಲಾಗುತ್ತಿದೆ ಎಂದರು.
ಕೆಲವು ಹಣ್ಣು ಮತ್ತು ತರಕಾರಿಗಳನ್ನು ಹೋಟೆಲ್‌ಗಳಿಗೆ ಮಾರಾಟ ಮಾಡಲು ರೈತರು ಬೆಳೆದಿರುತ್ತಾರೆ. ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗದ ಪ್ರಕರಣಗಳಿದ್ದರೆ, ಅವುಗಳಿಗೆ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಕೃಷಿ ಇಲಾಖೆಯಿಂದ ಸರ್ವೆ ಮಾಡಿಸಿ ಬೆಳೆ ಪರಿಹಾರ ಕೊಡಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ 13 ಸಾವಿರ ಕೋಟಿ ರೈತರಿಗೆ ಬೆಳೆ ಸಾಲ ನೀಡಲಾಗಿದೆ. ಈ ಸಾಲಿನಲ್ಲೂ ರೈತರಿಗೇ 13 ಸಾವಿರ ಕೋಟಿ ಮೊತ್ತದಲ್ಲಿ ಸಾಲ ನೀಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ರೈತರಿಗೆ ಸಾಲ ನೀಡುವ ಬಗ್ಗೆ ಗೈಡ್ ಲೈನ್ಸ್ ವಿಧಿಸಿ ಆದೇಶ ಹೊರಡಿಸಲಾಗುವುದು ಎಂದರು.
ಲಾಕ್ ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿಗಳು ನಾಳೆ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಈಗಾಗಲೇ ಕೃಷಿ ಕ್ಷೇತ್ರಕ್ಕೆ ಸಂಪೂರ್ಣ ಸಡಿಲಿಕೆ ನೀಡಲಾಗಿದೆ. ಈಗ ರೈತರಿಗೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಇಡಿಹಣ್ಣುಗಳನ್ನು ಮಾತ್ರ ಮಾರಾಟ ಮಾಡಬೇಕು. ಕಟ್ ಪೀಸ್ ಮಾಡಿ ಮಾರುವಂತಿಲ್ಲ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ. ಗ್ರೀನ್ ಪಾಸ್ ಪಡೆದು ಬೆಂಗಳೂರಿನಲ್ಲಿ ಮಾರಾಟ ಮಾಡಬಹುದು. ಬೆಂಗಳೂರಿನಲ್ಲಿ 1400 ಅಪಾರ್ಟ್ ಮೆಂಟ್ ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಹಾಪ್‌ಕಾಮ್ಸ್ಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಎ.ಪಿ.ಎಂ.ಸಿ. ಅಧ್ಯಕ್ಷ ದೊರೆಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.