ಟಿ20 ವಿಶ್ವಕಪ್ ತನ್ನದಾಗಿಸಿಕೊಂಡ ಭಾರತ

ಬ್ರಿಡ್ಜ್‌ಟೌನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತ ಎರಡನೇ ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ.

ಬ್ರಿಡ್ಜ್‌ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ವಿರಾಟ್ ಕೊಹ್ಲಿ 76 ರನ್ ಹಾಗೂ ಅಕ್ಷರ್ ಪಟೇಲ್ 47 ರನ್ ಗಳ ನೆರವಿನಿಂದ 176 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ  7 ರನ್ ಗಳಿಂದ ಸೋಲು ಕಂಡಿದೆ.

ದಕ್ಷಿಣ ಆಫ್ರಿಕಾ ಪರ ಹೆಂಡ್ರಿಕ್ಸ್ 4 ರನ್ ಗಳಿಸಿ ಔಟಾದರೆ ಮಾರ್ಕ್ರಾಮ್ ಸಹ 4 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಬ್ಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 31 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇನ್ನು ಡಿಕಾಕ್ 39 ರನ್ ಗಳಿಸಿ ಔಟಾದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ಲಾಸೆನ್ 52 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟರು. ಆದರೆ ಪಂದ್ಯ ಸೋತಿದೆ. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಅರ್ಷ್ ದೀಪ್ ಸಿಂಗ್ಮತ್ತು ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

ಕೊಹ್ಲಿ ಹಾಗೂ ಅಕ್ಷರ್ ಪಟೇಲ್ 106 ರನ್ ಗಳ ಜೊತೆಯಾಟ ನೀಡಿದರು. 47 ರನ್ ಗಳಿಸಿದ್ದ ಅಕ್ಷರ್ ಪಟೇಲ್ ರನ್ ಔಟ್ ಗೆ ಬಲಿಯಾದರು. ನಂತರ ಬಂದ ಶಿವಂ ದುಬೆ 27 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ನಾರ್ಟ್ಜೆ ತಲಾ 2 ವಿಕೆಟ್ ಪಡೆದಿದ್ದಾರೆ.