2019 ರಲ್ಲಿ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ 6 ಶತಕೋಟಿ ಡಾಲರ್ ಹೂಡಿಕೆ

ಬೆಂಗಳೂರು, ಏಪ್ರಿಲ್ 28, ಭಾರತದ ದೇಶೀಯ ಉದ್ಯಮದಲ್ಲಿನ ಹೂಡಿಕೆ ಬೆಳವಣಿಗೆಗಳ ಸಮಗ್ರ ನೋಟವನ್ನು ಪ್ರಮುಖ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ಸಿಬಿಆರ್‌ಇ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್ ಇಂದು ಬಿಡುಗಡೆ ಮಾಡಿದ್ದು, ಈ ವಲಯವು ಬಂಡವಾಳ ಹೂಡಿಕೆಗೆ ಎಷ್ಟು ಆಕರ್ಷಿತವಾಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.  2019 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬಂಡವಾಳ ಹೂಡಿಕೆಯಲ್ಲಿ ಶೇ 27 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಉದ್ಯಮದ  ಎಲ್ಲಾ ಪ್ರಮುಖ ವಿಭಾಗಗಳಲ್ಲಿ ಅಂದಾಜು ಆರು ಶತಕೋಟಿ ಡಾಲರ್ ಮೊತ್ತದ ಹೂಡಿಕೆಯಾಗಿದೆ ಎಂದು ಸಿಬಿಆರ್‌ಇ ಮಂಗಳವಾರ ಇಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ  ತಿಳಿಸಿದೆ.
ಕಚೇರಿ ಕಟ್ಟಡಗಳು ಮತ್ತು ನಿವೇಶನಗಳಲ್ಲಿ ಹೆಚ್ಚು ಹೂಡಿಕೆಯಾಗಿದೆ. ಈ ವಿಭಾಗಗಳಲ್ಲಿ ತಲಾ ಶೇ 40 ರಷ್ಟು ಬಂಡವಾಳ ಹೂಡಿಕೆಯಾಗಿದೆ. ನಂತರದ ಸ್ಥಾನದಲ್ಲಿರುವ ಹೋಟೆಲ್‌ ವಿಭಾಗದಲ್ಲಿ ಶೇ 11ರಷ್ಟು ಹೂಡಿಕೆಯಾಗಿದೆ. 2018 ಕ್ಕೆ ಹೋಲಿಸಿದರೆ ನಿವೇಶನ ಮತ್ತು ಜಮೀನಲ್ಲಿನ ಹೂಡಿಕೆ ಶೇ 5ರಷ್ಟು ಹೊಟೇಲ್ ವಿಭಾಗ ಶೇ 10ರಷ್ಟು ಏರಿಕೆ ದಾಖಲಿಸಿದೆ ಎಂದು ಸಿಬಿಆರ್‍ಇ ನ ಅಧ್ಯಯನದ ವರದಿ ತಿಳಿಸಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆರೋಗ್ಯಕರ ಹೂಡಿಕೆ ಚಟುವಟಿಕೆಯು ಈ ವಲಯದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಉದ್ಯಮವು ಹೆಚ್ಚು ಸಂಘಟಿತ, ಪಾರದರ್ಶಕ ಮತ್ತು ಲಾಭದಾಯಕವಾಗುವುದರೊಂದಿಗೆ, ಜಾಗತಿಕ ಮತ್ತು ದೇಶೀಯ ಉದ್ಯಮಿಗಳ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಮಾರುಕಟ್ಟೆಯಲ್ಲಿ ನಗದೀಕರಣ ಹೆಚ್ಚಿಸಲು ಸರ್ಕಾರ ಆರಂಭಿಸಿರುವ ಕ್ರಮಗಳು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತಿವೆ ಎಂದು ಸಿಬಿಆರ್‌ಇ  ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಅಧ್ಯಕ್ಷ ಮತ್ತು ಸಿಇಒ ಅನ್ಶುಮಾನ್  ಅಭಿಪ್ರಾಯಪಟ್ಟಿದ್ದಾರೆ.