ಗದಗ 11: ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ಗದಗ ಇವರ ಆಶ್ರಯದಲ್ಲಿ 'ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಹಾಗೂ ಕೃತಕ ಗರ್ಭಧಾರಣೆ' ಉದ್ಘಾಟನಾ ಕಾರ್ಯಕ್ರಮವನ್ನು ದಿ. 11ರಂದು ಕೆವಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಸಿ ಎಮ್.ಜಿ.ಹಿರೇಮಠ, ಜಿಲ್ಲಾಧಿಕಾರಿಗಳು, ಗದಗ ಇವರು ಮಾತನಾಡಿ ಕೇಂದ್ರ ಸರಕಾರ ಪಶು ಆರೋಗ್ಯಕ್ಕಾಗಿ ಮತ್ತು ಪಶುಸಂಗೋಪನೆಯಲ್ಲಿ ತೊಗಡಗಿದ ಪಶು ಪಾಲಕರ ಆದಾಯವನ್ನು ಹೆಚ್ಚಿಸಲು 'ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಮತ್ತು ಕೃತಕ ಗರ್ಭಧಾರಣೆ ಕಾರ್ಯಕ್ರಮವನ್ನು ರೂಪಿಸಿ ರಾಷ್ಟ್ರಾದ್ಯಂತ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು. ಜಾನುವಾರುಗಳಲ್ಲಿ ಮುಖ್ಯವಾಗಿ ಭಾದಿಸುವ ಕಾಲುಬಾಯಿ ಬೇನೆ ರೋಗ ಹಾಗೂ ಗರ್ಭಪಾತ ರೋಗಗಳಿಂದ ಪಶು ಉತ್ಪಾದಕತೆ ಕ್ಷೀಣಿಸುತ್ತಿದ್ದು, ಈ ನಿಟ್ಟಿನಲ್ಲಿ ಪಶುಪಾಲಕರು ತಮ್ಮ ಪಶುಗಳಿಗೆ ಲಸಿಕೆಯನ್ನು ಹಾಕಿಸಬೇಕೆಂದು ಹೇಳಿದರು. ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆಯ ಅನುಷ್ಠಾನದಿಂದ ದೇಶಿ ಪಶು ತಳಿಗಳನ್ನು ಸಂರಕ್ಷಿಸಲು ಮುಂದಾಗಬೇಕೆಂದು ತಿಳಿಸಿದರು. ಗದಗ ಜಿಲ್ಲೆಯಲ್ಲಿ 130 ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಕುಂತಲಾ ಮೂಲಿಮನಿ, ಅಧ್ಯಕ್ಷರು, ಜಿಲ್ಲಾ ಪಂಚಾಯತ, ಗದಗ ಇವರು ಪಶುಗಳ ಕಾಲುಬಾಯಿ ಬೇನೆ ರೋಗ ಹಾಗೂ ಗರ್ಭಕೋಶ ರೋಗಗಳ ನಿವಾರಣೆಗಾಗಿ ಬಾಧಿತ ಪಶುಗಳಿಗೆ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈರಪ್ಪ ನಾಡಗೌಡ, ಅಧ್ಯಕ್ಷರು, ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ, ಜಿಲ್ಲಾ ಪಂಚಾಯತ, ಗದಗ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎರಡೂ ರಾಷ್ಟ್ರೀಯ ಕಾರ್ಯಕ್ರಮಗಳ ಲಾಭವನ್ನು ಜಿಲ್ಲೆಯ ಪಶು ಪಾಲಕರು ಪಡೆಯಬೇಕೆಂದು ಹೇಳಿದರು. ಎಸ್.ಎಸ್.ಪಾಟೀಲ, ಅಧ್ಯಕ್ಷರು, ತಾಲೂಕು ಪಂಚಾಯತ, ಗದಗ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಇವರು ಮಥುರಾದಲ್ಲಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ಏರ್ಪಡಿಸಲಾಗಿತ್ತು. ಡಾ. ಎಮ್. ನಾಗರಾಜ, ಡೀನ್, ಪಶು ವೈದ್ಯಕೀಯ ಮಹಾವಿದ್ಯಾಲಯ, ಗದಗ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ. ಶಿವಕುಮಾರ ರಡ್ಡೇರ ಹಾಗೂ ಡಾ. ಸತೀಶ ಬಿರಾದಾರ, ಪ್ರಾದ್ಯಾಪಕರು, ಪಶು ವೈದ್ಯಕೀಯ ಮಹಾವಿದ್ಯಾಲಯ, ಗದಗ ಇವರು ಉದ್ಘಾಟನಾ ಸಮಾರಂಭದ ನಂತರ ತಾಂತ್ರಿಕ ಸಮಾವೇಶದಲ್ಲಿ ಪಶುಗಳ ರೋಗ ನಿಯಂತ್ರಣ, ಕೃತಕ ಗರ್ಭಧಾರಣೆ ಹಾಗೂ ಉತ್ಪಾದಕಾ ತಾಂತ್ರಿಕತೆಗಳ ಕುರಿತು ಉಪನ್ಯಾಸ ನೀಡಿದರು.
ಪ್ರಾರಂಭದಲ್ಲಿ ಡಾ. ಚೆನ್ನಕೇಶವಯ್ಯ, ಉಪ ನಿರ್ದೇಶಕರು, ಪಶು ಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆ, ಗದಗ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆವಿಕೆ ಮುಖ್ಯಸ್ಥರು ಡಾ. ಎಲ್.ಜಿ.ಹಿರೇಗೌಡರ ಸ್ವಾಗತಿಸಿದರು. ಕೃಷಿ ವಿಸ್ತರಣಾ ತಜ್ಞರಾದ ಎಸ್.ಎಚ್.ಆದಾಪೂರ ಇವರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ 300 ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು, ಪಶು ಪಾಲಕರು ಹಾಗೂ ಪಶು ಸಂಗೋಪನೆ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.