ಶೀಘ್ರದಲ್ಲೇ ಮೊದಲ ಬುಲೆಟ್ ಟ್ರೈನ್ ಆರಂಭ: ಪ್ರಧಾನಿ ಮೋದಿ

First bullet train to start soon: PM Modi

ನವದೆಹಲಿ 06: ಭಾರತದಲ್ಲಿ ಮೊದಲ ಬುಲೆಟ್ ರೈಲು ಶೀಘ್ರದಲ್ಲೇ ಓಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಲವು ರೈಲು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ತಮ್ಮ ಸರ್ಕಾರದ ಅವಧಿಯಲ್ಲಿ ಭಾರತೀಯ ರೈಲ್ವೇಯಲ್ಲಿ ಮೂಲಸೌಕರ್ಯ ಮತ್ತು ಸೇವೆಯಲ್ಲಿ ಕೈಗೊಂಡ ಗಮನಾರ್ಹ ಬದಲಾವಣೆಗಳನ್ನು ಎತ್ತಿ ತೋರಿಸಿದರು.ಜಮ್ಮು ಸೇರಿದಂತೆ ದೇಶದ ವಿವಿಧ ರೈಲು ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ರಾಯಗಡ ರೈಲ್ವೆ ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದರು ಮತ್ತು ತೆಲಂಗಾಣದ ಹೊಸ ಚಾರ್ಲಪಲ್ಲಿ ರೈಲ್ವೆ ಟರ್ಮಿನಲ್ ಅನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ತೆಲಂಗಾಣ, ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳು ಹಾಗೂ ಇತರ ಪ್ರಮುಖ ಗಣ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

ದೂರದ ಪ್ರಯಾಣವನ್ನು ಕಡಿಮೆ ಸಮಯದಲ್ಲಿ ಪ್ರಯಾಣಿಸುವುದಕ್ಕೆ ಜನರು ಹೆಚ್ಚು ಮನ್ನಣೆ ನೀಡುತ್ತಿರುವಾಗ, ಹೆಚ್ಚಿನ ವೇಗದ ರೈಲು ಸೇವೆಗಳ ಬೇಡಿಕೆಯು ಹೆಚ್ಚುತ್ತಲೇ ಇದೆ. ವಂದೇ ಭಾರತ್ ರೈಲುಗಳ ವಿಸ್ತರಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅಂತಹ 136ಕ್ಕೂ ಹೆಚ್ಚು ರೈಲುಗಳು ಈಗ ಭಾರತದಲ್ಲಿ 50ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು. ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 180 ಕಿಲೋಮೀಟರ್ ಗರಿಷ್ಠ ವೇಗವನ್ನು ಸಾಧಿಸಿದ ಇತ್ತೀಚಿನ ಯಶಸ್ವಿ ಪ್ರಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ, ಕಳೆದ ದಶಕದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಇದು ಐತಿಹಾಸಿಕ ಪರಿವರ್ತನೆಯಾಗಿದೆ. ಭಾರತದಲ್ಲಿ ಮೊದಲ ಬುಲೆಟ್ ರೈಲು ಓಡುವ ಸಮಯ ದೂರವಿಲ್ಲ ಎಂದು ಭರವಸೆ ನೀಡಿದರು.

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, 2026ರ ವೇಳೆಗೆ ಬುಲೆಟ್ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿ ಹೊಂದಿದೆ ಎಂದರು.