ಗುಡುಗು, ಮಿಂಚಿನ ಸಂಭಾಷಣೆ, ಗತ ವೈಭವ ಸಾರಿದ ರಕ್ತರಾತ್ರಿ ನಾಟಕ

District Kala Vaibhava- 2025

ಬಳ್ಳಾರಿ 06: ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದಿಂದ ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಎರಡು ದಿನ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ಕಲಾ ವೈಭವ- 2025ಜಿಲ್ಲಾ ಕಲಾ ವೈಭವ- 2025 ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಕೊನೆಯ ನಾಟಕ ಮೂರು ಗಂಟೆ ರಕ್ತರಾತ್ರಿ ಪ್ರೇಕ್ಷಕರಲ್ಲಿ ಮೈ ನವರೇಳಿಸಿದ ಅನುಭವ ನೀಡಿತು.  

ಗೆಣಕೆಹಾಳಿನ ಎಲೆವಾಳು ಸಿದ್ದಯ್ಯಸ್ವಾಮಿ ಕಲಾ ಬಳಗದ  ಸದಸ್ಯರು ಪ್ರದರ್ಶನಕ್ಕೆ ಪ್ರೇಕ್ಷಕರು ಮೂಕವಿಸ್ಮಿತರಾದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೆಣಕಿಹಾಳ ತಿಮ್ಮನಗೌಡ (ಅಶ್ವತ್ಥಾಮ), ಚಲನಚಿತ್ರ ನಟ, ಪತ್ರಕರ್ತ ಗಂಗಾವತಿ ನಾಗರಾಜ್ ಇಂಗಳಗಿ (ಶಕುನಿ), ಹಿರಿಯ ರಂಗಕಲಾವಿದ ಹೆಚ್‌.ಎಂ. ಅಮರೇಶ್ ಹಚ್ಚೊಳ್ಳಿ, (ದುರ್ಯೋಧನ) ತಮ್ಮ ಕಂಚಿನ ಕಂಠದ ಸಂಭಾಷಣೆ ಏರಿತದ ಮಾತುಗಳಿಂದ ಗುಡುಗು ಸಿಡಿಲು ಏಕಕಾಲಕ್ಕೆ ಸಂಭವಿಸಿದ ಅನುಭವ ನೀಡಿದರು. ಅದೇರೀತಿ ಭೀಮನ ಪಾತ್ರಧಾರಿ ಪಿ.ಚೇಲರ್‌ಸಾಬ್, ಕೃಷ್ಣನ ಪಾತ್ರಧಾರಿ ಜಗದೀಶ್ವರ ಸ್ವಾಮಿ ಗೋಸುವಾಳ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗತವೈಭವ ಧರೆಗಿಳಿಸಿದರು. ಇನ್ನುಳಿದಂತೆ ಬಸಯ್ಯಸ್ವಾಮಿ ಜವಳಗೇರಾ (ಕಲಿ, ಗಂಧರ್ವ, ಕರ್ಣ, ಪರಮೇಶ್ವರ), ಲಿಂಗನಗೌಡ ಎರಡೋಣ (ಧರ್ಮರಾಯ), ನಾಗಭೂಷಣ ಬಳ್ಳಾರಿ (ಅರ್ಜುನ)ಅತ್ಯುತ್ತಮ ಅಭಿನಯದ ಮೂಲಕ ಗಮನಸೆಳೆದರು.   

ಜಯಶ್ರೀ ಸಿಂಧನೂರು (ದ್ರೌಪದಿ), ವೀಣಾ ಆದೋನಿ (ಭಾನಮತಿ), ಮೀನಾಕ್ಷಿ ಬಳ್ಳಾರಿ (ಉತ್ತರೆ), ಮೌನೇಶ್ ಬಡಿಗೇರ್ ಹರಪನಹಳ್ಳಿ (ಅನಂಗ ಪುಷ್ಪ) ಮನು (ಪಾರ್ವತಿ), ಇವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿರು. 

ಸಂಗೀತ ತಿಪ್ಪೆಸ್ವಾಮಿ ಮುದ್ದಟನೂರು, ತಬಲಾ ವಿರುಪಾಕ್ಷಿ ಬಳ್ಳಾರಿ ಇವರ ವಾದನ ಗಮನಸೆಳೆಯಿತು. ಕೊಟ್ಯಾಂತರ ಪ್ರಯೋಗ ಕಂಡಿರುವ ರಕ್ತರಾತ್ರಿ ಕರ್ನಾಟಕದ ಶೇಕ್ಸ್‌ಪಿಯರ್ ಎಂದೇ ಖ್ಯಾತಗೊಂಡಿದ್ದ ಕಂದಗಲ್ ಹನುಮಂತರಾಯ ಅವರು ವಿರಚಿತ ಕೃತಿಯಾಗಿದ್ದು, ಕಬ್ಬಿಣದ ಕಡಲೆಯಂತ ಸಂಭಾಷಣೆ ಪಾತಧಾರಿಗಳ ಬಾಯಲ್ಲಿ ಸುಲಲಿತವಾಗಿ ಹರಿದು ಬಂದಿದ್ದು ಮಹಾಭಾರತ ಕಾಲ ಪ್ರೇವೆಶಿಸಿದಂತಿತ್ತು. ಬಳ್ಳಾರಿ ಐಜಿಪಿ ಲೋಕೇಶ್ ಹಾಗೂ ಸಣ್ಣ ನೀರಾವರಿ ಇಲಾಖೆ ರಾಜ್ಯ ಕಾರ್ಯದರ್ಶಿ ಪಂಪನಗೌಡ ಗೆಣಕೆಹಾಳ್ ಇವರು ಕಲಾವಿದರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸಂಘಟಕರ ಅಚ್ಚುಕಟ್ಟು ನಿರ್ವಹಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.