ಕಾಸರಗೋಡು, ಏಪ್ರಿಲ್ 24,ಕೋವಿಡ್- 19 ಹರಡುವಿಕೆ ತಡೆಯುವ ಪ್ರಯತ್ನಗಳನ್ನು ತೀವ್ರಗೊಳಿಸುವ ಭಾಗವಾಗಿ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಕುಂಬಳ, ಮೊಗ್ರಲ್-ಪುತ್ತೂರ್, ಚೆಮ್ಮನಾಡ್, ಮಧುರ್, ಮುಲಿಯಾರ್ ಗ್ರಾಮಪಂಚಾಯಿತಿಗಳನ್ನು ಹೊಸ ಹಾಟ್ ಸ್ಪಾಟ್ ಸ್ಥಳಗಳಾಗಿ ಗುರುತಿಸಲಾಗಿದ್ದು, ಲಾಕ್‍ಡೌನ್ ಗಾಗಿ ಹೊಸ ನಿಯಮಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಸಜಿತ್ ಬಾಬು ತಿಳಿಸಿದ್ದಾರೆ.ಈ ಹಿಂದೆ, ತಲಂಕೆರಿ, ಚೋರಿ, ಕಲನಾಡ್ ಮತ್ತು ನೆಲ್ಲಿಕ್ಕನ್ನು ಪ್ರದೇಶಗಳಲ್ಲಿ ನಿರಂತರವಾಗಿ ಪೊಲೀಸ್ ಗಸ್ತನ್ನು ಮನೆ- ಮನೆಗೆ ನಿಯೋಜಿಸಲಾಗಿದೆ. ಈ ಪ್ರದೇಶಗಳಲ್ಲಿ ಕೋವಿಡ್ -19ನ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಇದೇ ಜಿಲ್ಲೆಯಿಂದ ವರದಿಯಾಗಿವೆ. ಆದರೆ ಜಿಲ್ಲೆಯಾದ್ಯಂತ ಕ್ಲಸ್ಟರ್ ಮಟ್ಟದ ಗಸ್ತು ತಿರುಗುವಿಕೆಯ ಮೂಲಕ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ ಸೋಂಕು ಹರಡುವಿಕೆ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿದೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 4 (2) (ಎ) ಮತ್ತು ಐಪಿಸಿಯ ಸೆಕ್ಷನ್ 269 ಮತ್ತು 270 ರ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.