ಶಿವಮೊಗ್ಗ, ಮೇ 2,ರಾಜ್ಯದಲ್ಲಿ ಅಂತರ್ಜಲ ಚೇತನ ಎಂಬ ವಿಶೇಷ ಯೋಜನೆಯನ್ನು ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಜಾರಿಗೆ ತರಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಆರ್ಟ್ ಆಫ್ ಲೀವಿಂಗ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಯೋಜನೆಯ ರೂಪುರೇಷೆಗಳನ್ನು ರೂಪಿಸಲಾಗಿದೆ ಎಂದರು. ಮೊದಲ ಹಂತದಲ್ಲಿ ಶಿವಮೊಗ್ಗ, ಕೋಲಾರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಈ ೯ ಜಿಲ್ಲೆಗಳಲ್ಲಿ ಯೋಜನೆಯನ್ನು ಆರಂಭಿಸಲಾಗುತ್ತದೆ. ನಂತರ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.ಈ ತಿಂಗಳ ೬ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದ್ದು, ಉಳಿದೆಡೆ ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಲಹೆ ಮೇರೆಗೆ ಯೋಜನೆಯನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಎಲ್ಲಾ ಗ್ರಾಮಗಳಲ್ಲಿ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ವೈಯಕ್ತಿಕ ಶುಚಿತ್ವಕ್ಕೆ ಒತ್ತು ನೀಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.