ಕೆಂಪು ವಲಯ ಹೊರತುಪಡಿಸಿ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ: ಗೋವಿಂದ ಕಾರಜೋಳ

ಬೆಂಗಳೂರು, ಏ. 28,ಕೊರೊನಾ ನಿಯಂತ್ರಣಕ್ಕೆ ಪೂರಕ  ನಿರ್ದೇಶನಗಳನ್ನು  ಅನುಸರಿಸಿ ಕೆಂಪು ವಲಯವನ್ನು ಹೊರತು ಪಡಿಸಿ ಉಳಿದ ವಲಯಗಳಲ್ಲಿ  ಕೇಂದ್ರ ಸರ್ಕಾರವು ಮಂಜೂರು ಮಾಡಿದ  ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಕಾಮಗಾರಿಗಳನ್ನು  ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ  ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.ಕೇಂದ್ರ ಭೂಸಾರಿಗೆ ಸಚಿವ  ನಿತಿನ್ ಗಡ್ಕರಿ ಅವರು ಎಲ್ಲಾ ರಾಜ್ಯಗಳ ಲೋಕೋಪಯೋಗಿ ಹಾಗೂ ಸಾರಿಗೆ ಸಚಿವರೊಂದಿಗೆ ಇಂದು ನಡೆಸಿದ ವಿಡಿಯೋ ಸಂವಾದ ದಲ್ಲಿ ಮಾತನಾಡಿದ ಕಾರಜೋಳ, ನೀರು ಸಂಗ್ರಹಕ್ಕೆ ಅನುಕೂಲವಾಗುವಂತೆ ಮಹಾರಾಷ್ಟ್ರದ ಮಾದರಿಯ  ಬ್ರಿಡ್ಜ್ ಕೆಳಭಾಗದಲ್ಲಿ  ವಿಯರ್ ನಿರ್ಮಾಣ  ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ರಾಜ್ಯ ಸರ್ಕಾರವು   ಈಗಾಗಲೇ ಕೇಂದ್ರ ಸರ್ಕಾರಕ್ಕೆ  ಸಲ್ಲಿಸಿರುವ  8100 ಕೋಟಿ ವೆಚ್ಚದ 2020-21 ನೇ ಸಾಲಿನ  ಪ್ರಸ್ತಾವನೆಗಳನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರದ  ನಿರ್ದೇಶನಗಳನ್ನು ಅಳವಡಿಸಿಕೊಂಡು, ರಸ್ತೆ ನಿರ್ಮಾಣ  ಕಾಮಗಾರಿಗಳು, ಕಟ್ಟಡ ಕಾರ್ಮಿಕರು, ಸಿಬ್ಬಂದಿ ವರ್ಗದವರು , ವಾಹನ ಚಾಲಕರು, ಸಹಾಯಕರು ಮಾಸ್ಕ್ , ಸ್ಯಾನಿಟೈಜರ್ ಗಳನ್ನು ಉಪಯೋಗಿಸುವಂತೆ ಕ್ರಮಕೈಗೊಳ್ಳಲಾಗಿದೆ. ಕಾಮಗಾರಿ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
 ಸರಕು ಸಾಗಾಣಿಕೆ, ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಾಗಾಣಿಕೆ ವಾಹನಗಳಿಗೆ ಮುಕ್ತವಾಗಿ ಸಂಚರಿಸುವಂತೆ ಕ್ರಮಕೈಗೊಳ್ಳಲಾಗಿದೆ. ರೈತರಿಗೆ, ಕೃಷಿ ಕಾರ್ಮಿಕರಿಗೆ ಯಾವುದೇ ಅಡತಡೆ ಮಾಡದಂತೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೊರೊನಾ ನಿಯಂತ್ರಣ ಕ್ಕಾಗಿ ರಾಜ್ಯ ಸರ್ಕಾರವು ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಡಿಸಿಎಂ ವಿವರಿಸಿದರು.ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ಸಂಸ್ಥೆಗಳ ಸ್ಥಿತಿಗತಿ ಸಂಚಾರ ವ್ಯವಸ್ಥೆ ಯ ಕುರಿತು ವಿವರಿಸಿದರು.  ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ  ರಜನೀಶ್ ಗೋಯಲ್, ಕಾರ್ಯದರ್ಶಿ ಬಿ. ಗುರುಪ್ರಸಾದ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಗೌರವ ಗುಪ್ತ, ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ  ಶಿವಯೋಗಿ ಕಳಸದ ಮತ್ತಿತ್ತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.