ಅಕ್ರಮ ಮದ್ಯ ದಾಸ್ತಾನು, ಮಾರಾಟ: ಆರೋಪಿಯ ಬಂಧನ

ಬೆಂಗಳೂರು, ಏ.29 ,ಲಾಕ್‌ ಡೌನ್‌ ಸಮಯದಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆತನಿಂದ 67 ಸಾವಿರ ರೂ. ಮೌಲ್ಯದ ಮದ್ಯ ಮತ್ತು 6 ಲಕ್ಷ ರೂ.ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ನೆರಿಗೆ ಗ್ರಾಮದ ನಿವಾಸಿ ಶಂಕರ (26) ಬಂಧಿತ ಆರೋಪಿ.ಈತ ವರ್ತೂರಿನ 2ನೇ ಹಂತದ ಮಧುರಾನಗರದಲ್ಲಿ ಕಾರು ಮತ್ತು ಮನೆಯಲ್ಲಿ ಅನಧಿಕೃತವಾಗಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದಾನೆ ಎಂಬುದರ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.
ಆತನಿಂದ 67 ಸಾವಿರ ರೂ ಮೌಲ್ಯದ ಮದ್ಯ ಹಾಗೂ 6 ಲಕ್ಷ ರೂ. ಬೆಲೆಬಾಳುವ ಮಾರುತಿ ಸಿಯಾಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಜಗತ್ತಿನಾದ್ಯಂತ ಕೊರೋನಾ ವೈರಸ್‌ ಅಟ್ಟಹಾಸ ಮೆರೆದಿದ್ದು, ಸೋಂಕು ಪೀಡಿತರಾಗಿ ಸಾವು ನೋವು ಸಂಭವಿಸುತ್ತಿದ್ದು, ಈ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಆರೋಪಿಗಳು ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.