ಅಕ್ರಮ ಕಟ್ಟಡಗಳ ಸಕ್ರಮ: ಸೆಸ್ ಸಂಗ್ರಹಿಸಲು ಸಿಐಟಿಯು ಒತ್ತಾಯ

ಬೆಂಗಳೂರು, ಏ.19, ರಾಜ್ಯ ಸರ್ಕಾರ ಕೊರೋನಾ ದಿಂದ ಉಂಟಾಗಿರುವ ಆರ್ಥಿಕ ನಷ್ಟ ತುಂಬಿಸಲು  ರಾಜ್ಯದಲ್ಲಿ ಸುಮಾರು 35 ಲಕ್ಷ ಅಕ್ರಮ ಕಟ್ಟಡಗಳನ್ನು ಸರ್ಕಾರ ಸಕ್ರಮಗೊಳಿಸುವ  ತೀರ್ಮಾನಕ್ಕೆ ಮುಂದಾಗಿದೆ. ಈ ಸಂದರ್ಭದಲ್ಲಿ 10 ಲಕ್ಷ ರೂ.ಗಿಂತ ಮೇಲ್ಪಟ್ಟು  ನಿರ್ಮಾಣ ಗೊಂಡಿರುವ ಎಲ್ಲಾ ಕಟ್ಟಡಗಳ ಮಾಲೀಕರಿಂದ ಕಟ್ಟಡ ಕಲ್ಯಾಣ ಮಂಡಳಿಗೆ ಪಾವತಿಸಬೇಕಾದ  ಸೆಸ್ ಹಣವನ್ನು ಕಡ್ಡಾಯವಾಗಿ ಸಂಗ್ರಹಿಸುವ ಅಂಶವನ್ನು ರಾಜ್ಯ ಸರ್ಕಾರ ರೂಪಿಸುತ್ತಿರುವ  ಮಾರ್ಗಸೂಚಿಯಲ್ಲಿ ಕಡ್ಡಾಯವಾಗಿ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ  ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ, 10 ಲಕ್ಷ ರೂ.ಗಿಂತ ಮೇಲ್ಪಟ್ಟು  ನಿರ್ಮಾಣ ಗೊಂಡಿರುವ ಎಲ್ಲಾ ಕಟ್ಟಡಗಳ ಮಾಲೀಕರಿಂದ ಕಟ್ಟಡ ಕಲ್ಯಾಣ ಮಂಡಳಿಗೆ ಪಾವತಿಸಬೇಕಾದ  ಸೆಸ್ ಹಣವನ್ನು ಕಡ್ಡಾಯವಾಗಿ ಸಂಗ್ರಹಿಸುವ ಅಂಶವನ್ನು ರಾಜ್ಯ ಸರ್ಕಾರ ರೂಪಿಸುತ್ತಿರುವ  ಮಾರ್ಗಸೂಚಿಯಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಇಲ್ಲದಿದ್ದರೆ ಇದು  ಸುಪ್ರಿಂಕೋರ್ಟ್‌ ತೀರ್ಪಿನ ಆದೇಶ ಉಲ್ಲಂಘನೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕೋವಿಡ್‌ 19 ಸೋಂಕು ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಸುಮಾರು 35 ಲಕ್ಷಕ್ಕೂ ಅಧಿಕ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು  ಸಕ್ರಮಗೊಳಿಸಲು ನಿರ್ಧರಿಸಿದೆ. ಇಂತಹ ಎಲ್ಲಾ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವಾಗ ಆ ಕಟ್ಟಡ ನಿರ್ಮಾಣ ಮಾಲೀಕರು ಕಾನೂನು ಪ್ರಕಾರ ಕಟ್ಟಡ ಮತ್ತು ಇತರ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ನಿರ್ಮಾಣ ಕಲ್ಯಾಣ ಮಂಡಳಿಗೆ ನೀಡಬೇಕಾದ ಶೇಕಡಾ1ರಷ್ಟು ಸೆಸ್ ಹಣವನ್ನು ಸರ್ಕಾರ ವಸೂಲಿ ಮಾಡಲು ಮಾರ್ಗಸೂಚಿ ರೂಪಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರ ಒಂದರಲ್ಲೆ ಸುಮಾರು 2.93 ಲಕ್ಷ ಅಕ್ರಮ ಕಟ್ಟಡಗಳು ನಿರ್ಮಾಣವಾಗಿವೆ. ರಾಜ್ಯದಲ್ಲಿ ಒಟ್ಟಾರೆ ಸುಮಾರು 35 ಲಕ್ಷ ಕಟ್ಟಡಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ. ಆಈಗ ಅದರ ಪ್ರಮಾಣ ಇನ್ನೂ ಹೆಚ್ಚಾಗಿದೆ. ಕೊರೋನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ರಾಜ್ಯ ಸರ್ಕಾರವು ಶೇಕಡಾ 50ರಷ್ಟು ಕಾನೂನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಮೇಲೆ ಶೇಕಡಾ 6ರಷ್ಟು ಹಾಗೂ ಶೇಕಡಾ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘಿಸಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ಮೇಲೆ ಮಾರುಕಟ್ಟೆ ದರದ ಶೇಕಡಾ50ರಷ್ಟು ದಂಡ ವಿಧಿಸಿ ಸಕ್ರಮಗೊಳಿಸಲು ತೀರ್ಮಾನಿಸಿದೆ. ಆದರೆ ಹೀಗೆ ಅಕ್ರಮವಾಗಿ ನಿರ್ಮಾಣಗೊಂಡ ಕಟ್ಟಡಗಳ ಮೌಲ್ಯವು 10 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಅಂತಹ ಕಟ್ಟಡಗಳ ಮಾಲೀಕರು ಅನುಮತಿ ನೀಡುವ ಸ್ಥಳೀಯ ಸಂಸ್ಥೆಗಳ ಮೂಲಕ ಶೇಕಡಾ 1ರಷ್ಟು ಸೆಸ್‌ ಅನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಲ್ಲಿಸಬೇಕಿರುವುದನ್ನು ಕಟ್ಟಡ ಮತ್ತು ಇತರ ಕಾರ್ಮಿಕ ಕಾಯ್ದೆ ಮತ್ತು ಸೆಸ್‌ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.  ಸರ್ವೋಚ್ಚ ನ್ಯಾಯಾಲಯ ಮಾರ್ಚ್ 18 2018, ರಂದು ನೀಡಿದ ತೀರ್ಪಿನಲ್ಲಿಯೂ ಸೆಸ್‌ ಸಂಗ್ರಹವನ್ನು ಸಮರ್ಪಕವಾಗಿ ನಡೆಸಬೇಕೆಂಬ ನಿರ್ದೇಶನವನ್ನು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ನೀಡಿದೆ. ಆದರೆ BOCW Welfare cess act 1996 ಕಾನೂನು ಪ್ರಕಾರ ಶೇಕಡಾ1ರಷ್ಟು ಸೆಸ್‌ ಸಂಗ್ರಹಿಸುವಲ್ಲಿ ಸ್ಥಳೀಯ ಸಮಿತಿಗಳು ವಿಫಲವಾಗಿವೆ. ಇದರಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ  ಕಲ್ಯಾಣ ಮಂಡಳಿಗೆ ಬರಬೇಕಾದ ಸಾವಿರಾರು ಕೋಟಿ ರೂ. ಸೆಸ್ ಹಣ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.