ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನ್ಯೂನತೆ ಕಂಡುಬಂದಲ್ಲಿ ಮಾಹಿತಿ ನೀಡಬಹುದು

ಪಿಸಿ, ಪಿಎನ್‌ಡಿಟಿ ಸಭೆಯಲ್ಲಿ ಡಿಹೆಚ್‌ಓ ಡಾ.ವೈ.ರಮೇಶ್ ಬಾಬು 

ಬಳ್ಳಾರಿ 21: ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸೇರಿದಂತೆ ಇತರೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನ್ಯೂನತೆ, ಲೋಪದೋಷಗಳು ಕಂಡುಬಂದಲ್ಲಿ ಸಾರ್ವಜನಿಕರು, ರೋಗಿಗಳು ಜಿಲ್ಲಾಧಿಕಾರಿಗಳ ಜಿಲ್ಲಾ ಸಕ್ಷಮ ಪ್ರಾಧಿಕಾರ, ಪಿಸಿ ಮತ್ತು ಪಿಎನ್‌ಡಿಪಿ ಸಮಿತಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದರು. 

ನಗರದ ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಏರಿ​‍್ಡಸಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ ಲಿಂಗ ಆಯ್ಕೆ ನಿಷೇಧ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. 

ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ(ಪಿ.ಸಿ.್ಘ ಪಿ.ಎನ್‌.ಡಿ.ಟಿ.) ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆಯನ್ವಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಯಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸಮಿತಿಗೆ ಸೂಚಿಸಿದರು. 

ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿನ ಪ್ರತಿಯೊಂದು ಯಂತ್ರೋಪಕರಣಗಳ ದಾಖಲಾತಿ ನೋಂದಣಿಯು ಕಡ್ಡಾಯವಾಗಿದೆ. ಗರ್ಭಿಣಿ ಸ್ತ್ರೀಯರ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ಗರ್ಭಾವ್ಯಸ್ಥೆಯ ಮಾಹಿತಿಯನ್ನು ಫಾರ್ಮ್‌-ಎಫ್ ನಲ್ಲಿ ತಪ್ಪದೇ ನಮೂದಿಸಬೇಕು ಎಂದು ತಿಳಿಸಿದರು. 

ಜಿಲ್ಲೆಯಲ್ಲಿ  76 ಸ್ಕ್ಯಾನಿಂಗ್ ಸೆಂಟರ್‌ಗಳು ನೋಂದಣಿಗೊಂಡು ಕಾರ್ಯ ನಿರ್ವಹಿಸುತ್ತಿವೆ. ಪಿಸಿ ಮತ್ತು ಪಿಎನ್‌ಡಿಟಿ ಸಮಿತಿಯು ಕಳೆದ ಮೂರು ತಿಂಗಳಲ್ಲಿ 72 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ  ಭೇಟಿ ನೀಡಿದ್ದು, ನ್ಯೂನತೆ ಕಂಡುಬಂದಂತಹ 27 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದರು. 

ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಘಟನೆಗಳು ಕಂಡುಬಂದಲ್ಲಿ ಕಾನೂನಿನನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಣ್ಣು ಭ್ರೂಣ ಲಿಂಗ ಪತ್ತೆಯ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ ರಾಜ್ಯ ಸರ್ಕಾರದ ವತಿಯಿಂದ ಒಂದು ಲಕ್ಷ ಬಹುಮಾನ ನೀಡಲಾಗುತ್ತದೆ ಎಂದರು. 

ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಉಪಯೋಗಕ್ಕೆ ಬಾರದ ಯಂತ್ರೋಪಕರಣಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಜಿಲ್ಲಾ ಸಕ್ಷಮ ಪ್ರಾಧಿಕಾರ, ಪಿಸಿ ಮತ್ತು ಪಿಎನ್‌ಡಿಪಿ ಸಮಿತಿಗೆ ಮಾಹಿತಿ ನೀಡಬಹುದು ಎಂದರು. 

ಸಭೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಸಮಿತಿಯ ಅಧ್ಯಕ್ಷ ಡಾ.ಶಂಭು.ಎಸ್, ಸದಸ್ಯರಾದ ಡಾ.ಭಾವನಾ.ಡಿ, ಡಾ.ಶ್ರಾವಂತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌.ದಾಸಪ್ಪನವರ, ಸಮಿತಿಯ ವಿಷಯ ನಿರ್ವಾಹಕರಾದ ಅರುಣ್ ಕುಮಾರ್ ಮತ್ತು ಕೆ.ಹೆಚ್ ಗೋಪಾಲ್ ಉಪಸ್ಥಿತರಿದ್ದರು.