ಭಾವಿಯಲ್ಲಿ ಬಿದ್ದ ಎತ್ತುಗಳನ್ನು ಹೊರ ತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ

ತಾಳಿಕೋಟಿ 21: ತಾಲೂಕಿನ ಗೊಟಖಂಡಕಿ ಗ್ರಾಮದ ರೈತ ದೇವಣ್ಣ ಕವಡಿಮಟ್ಟಿ ಇವರ ಹೊಲದ  ಭಾವಿಯಲ್ಲಿ ಬಿದ್ದ ಎರಡು ಎತ್ತುಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಶುಕ್ರವಾರ ತಾಲೂಕಿನ ಗೊಟಖಂಡಕಿ ಗ್ರಾಮದ ರೈತ ದೇವಣ್ಣ ಕವಡಿಮಟ್ಟಿ ಅವರ ಹೊಲದಲ್ಲಿ ಮೇಯಲು ಬಿಟ್ಟ  ಎರಡು  ಎತ್ತುಗಳು ಹೊಲದಲ್ಲಿರುವ ನೀರಿಲ್ಲದ ತೆರೆದ ಬಾವಿಗೆ ಬಿದ್ದಿದ್ದವು. ಎತ್ತುಗಳ ಮಾಲಿಕ ರೈತ ಕವಡಿಮಟ್ಟಿ ಅವರು ಗ್ರಾಮಸ್ಥರ ಸಹಾಯದಿಂದ ಅಗ್ನಿಶಾಮಕ ದಳದ ಕಚೇರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತರ ಎರಡು ತಾಸುಗಳ ವರೆಗೆ ಕಾರ್ಯಾಚರಣೆ ನಡೆಸಿ ಎತ್ತುಗಳನ್ನು ಹೊರತೆಗೆಯಲು ಯಶಸ್ವಿಯಾಗಿದ್ದಾರೆ ಆದರೆ ಅದರಲ್ಲಿ ಒಂದು ಎತ್ತು ಅಸು ನೀಗಿದ್ದು ಒಂದು ಸುರಕ್ಷಿತವಾಗಿದೆ.ಈ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳದ ಪ್ರಭಾರಿ ಅಧಿಕಾರಿ ಪ್ರಭು ಸಣ್ಣಕ್ಕಿ. ವಾಹನ ಚಾಲಕ ವಿರೇಶ ಹಂಡರಗಲ್‌. ಪಿಸಿಒ ಹನುಮಂತರಾಯ ಕರ್ಕಳ್ಳಿ ಸಂತೋಷ ಲಮಾಣಿ ಕಾರ್ಯನಿರ್ವಹಿಸಿದರು.