ಮಾತು ಬಿಟ್ಟಿದ್ದೆ, ಸಂಬಂಧ ಕಳೆದುಕೊಂಡಿರಲಿಲ್ಲ: ಮಹೇಂದ್ರ ಕುಮಾರ್ ನಿಧನಕ್ಕೆ ಸಿಟಿ ರವಿ ಸಂತಾಪ

ಬೆಂಗಳೂರು,  ಏ.25,ಪ್ರಗತಿ ಪರ ಚಿಂತಕ ಹಾಗೂ ಭಜರಂಗ ದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ  ಕುಮಾರ್ ಅವರ ನಿಧನಕ್ಕೆ ಸಚಿವ ಸಿಟಿ ರವಿ ಅವರು ಸಂತಾಪ ಸೂಚಿಸಿದ್ದಾರೆ.ಫೇಸ್ ಬುಕ್ ಮೂಲಕ ಸಂತಾಪ ಸೂಚಿಸಿದ ಸಚಿವರು,  ಇಂದು ಬೆಳಗ್ಗೆ ಎದ್ದ ತಕ್ಷಣ ಒಂದು ಆಘಾತಕಾರಿ ಸುದ್ದಿ. ಬಹಳ  ವರ್ಷಗಳ ಕಾಲ ನಮ್ಮ ಸಂಘಟನೆಯ ಜವಾಬ್ದಾರಿ ಹೊತ್ತು ಕೆಲಸ ಮಾಡಿ, ಕಳೆದ ಹತ್ತು  ವರ್ಷಗಳಿಂದ ಸಂಘಟನೆಯಿಂದ ದೂರ ಹೋಗಿ, ವೈಚಾರಿಕ ಪ್ರೀತಿ - ವೈಚಾರಿಕ ವಿರೋಧವಾಗಿ ಬದಲಾಗಿ  ಇತ್ತೀಚಿನ ದಿನಗಳಲ್ಲಿ ಅರಿವಿದ್ದೋ, ಇಲ್ಲದೆಯೋ ಕೆಲವು ರಾಷ್ಟ್ರ ಘಾತುಕ ಸಂಘಟನೆಗಳ  ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮಿತ್ರ ಕೊಪ್ಪದ ಮಹೇಂದ್ರ ಹೃದಯಾಘಾತದಿಂದ  ನಿಧನರಾಗಿದ್ದಾರೆ.
ಬಹಳ ಚಿಕ್ಕ  ವಯಸ್ಸು, ಐವತ್ತರ ಒಳಗಿನವನು. ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಮಹೇಂದ್ರ  ಆಗಲಿದ್ದಾನೆ. ಸಾವು ಯಾರಿಗೆ ಹೇಗೆ ಬರುತ್ತದೋ ಗೊತ್ತಿಲ್ಲ. ಬದುಕಿದ್ದಾಗ ಒಳ್ಳೆಯ ಕೆಲಸ  ಮಾಡುವುದು ಜೀವನದ ಸಾರ್ಥಕತೆ. ನಮ್ಮ ಜಿಲ್ಲೆಯಲ್ಲಿ ಬಜರಂಗದಳ ಸಂಘಟನೆ ಬಲವಾಗಿ ಬೆಳೆಯಲು  ಮಹೇಂದ್ರನದ್ದೂ ಪಾತ್ರವಿದೆ. ಕೆಲವು ಸಾಂದರ್ಭಿಕ ತಪ್ಪು ತೀರ್ಮಾನಗಳು, ಇನ್ನೊಬ್ಬರ  ಜೊತೆಗೆ ಹೋಲಿಕೆ, ಸಂಘಟನೆಯ ಪ್ರಮುಖರ ಜೊತೆ ಚರ್ಚೆಯಿಲ್ಲದೆ ವ್ಯಕ್ತಿಗತ ತೀರ್ಮಾನ, ಇಂತಹ  ಹಲವು ಕಾರಣಗಳಿಂದ ಸಂಘಟನೆಯಿಂದ ದೂರ ಹೋದ ಸಹೃದಯಿ ಮಿತ್ರ ಈಗ ಲೋಕದಿಂದಲೇ  ದೂರವಾಗಿದ್ದಾನೆ. ಈ ಸಾವು ದುರದೃಷ್ಟಕರ, ನನಗೆ ನಂಬಲೇ ಸಾಧ್ಯವಾಗುತ್ತಿಲ್ಲ. ಬಹಳ ಸಾರಿ  ಅವರೊಂದಿಗೆ ನಾನು ಜಗಳವಾಡಿದ್ದೇನೆ, ಮಾತು ಬಿಟ್ಟಿದ್ದೇನೆ ಆದರೆ ಸಂಬಂಧ  ಕಳೆದುಕೊಂಡಿರಲಿಲ್ಲ. ಕೆಲವು ದಿನಗಳ ನಂತರ ಮತ್ತೆ ಅವನು ಅಥವಾ ನಾನು ರೀ ಕನೆಕ್ಟ್  ಮಾಡಿಕೊಂಡಿದ್ದೇವೆ. ಫೋನ್ ಮಾಡಬಾರದೆಂದುಕೊಂಡರು ಬಯ್ಯುವುದಕ್ಕೆ ಆದರೂ ಫೋನ್  ಮಾಡುತ್ತಿದ್ದೆ. ಈಗ ಅವನೇ ಇಲ್ಲ. ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ. ಅದಕ್ಕೆ  ಇರಬೇಕು" ಬದುಕು ಜಟಕಾಬಂಡಿ ವಿಧಿಯದರ ಸಾಹೇಬ, ಮದುವೆಗೂ ಮಸಣಕೋ ಹೋಗೆಂದ ಕಡೆಹೋಗು  ಪದಕುಸಿವ ನೆಲವಿಹುದು ಮಂಕುತಿಮ್ಮ" ಅಂತ ಡಿವಿಜಿ ಅವರು ಹೇಳಿರುವುದು. ಏನಾದರೂ  ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಮಹೇಂದ್ರ ಅಂದುಕೊಂಡಿದ್ದನ್ನು ಸಾಧಿಸಲು  ಸಾಧ್ಯವಾಗದೆ ನಮ್ಮನ್ನು ಅಗಲಿದ್ದಾನೆ. ಅವನ ಆತ್ಮಕ್ಕೆ ಸದ್ಗತಿ ದೊರಕಲಿ, ಅವನ  ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಓಂ ಶಾಂತಿ, ಶಾಂತಿ, ಶಾಂತಿ ಹಿ:ಎಂದು ಬರೆಯುವ ಮೂಲಕ ಸಂತಾಪ ಸೂಚಿಸಿದ್ದಾರೆ.