ಮೆಕ್ಕಾ 07: ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರದ ಬಹುತೇಕ ಪ್ರದೇಶಗಳು ಭಾರೀ ಗಾಳಿ-ಮಳೆಗೆ ತತ್ತರಿಸಿ ಹೋಗಿರುವುದಾಗಿ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
ಪರಿಸರ ಸಚಿವಾಲಯದ ಮಾಹಿತಿ ಪ್ರಕಾರ, ಬರ್ದ್ ಗವರ್ನರೇಟ್ ನ ಅಲ್ ಶಫಿಯಾದಲ್ಲಿ ದಾಖಲೆಯ 49.2 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ಅದೇ ರೀತಿ ಜೆಡ್ಡಾದ ಬಾಸ್ಟೀನ್ ನಲ್ಲಿ 38 ಮಿಲಿ ಮೀಟರ್ ಮಳೆಯಾಗಿತ್ತು. ಅಲ್ಲದೇ ಮದೀನಾದ ಪ್ರವಾದಿ ಮಸೀದಿಯ ಸೆಂಟ್ರಲ್ ಹರಮ್ ಪ್ರದೇಶದಲ್ಲಿ 36.1 ಮಿಲಿ ಮೀಟರ್ ಮಳೆಯಾಗಿದ್ದು, ಕಾಬಾ ಮಸೀದಿ ಸಮೀಪ 28.4 ಮಿಲಿ ಮೀಟರ್ ಮಳೆಯಾಗಿರುವುದಾಗಿ ವಿವರಿಸಿದೆ.
ಮೆಕ್ಕಾ, ಮದೀನಾ, ಕ್ವಾಸಿಂ, ಟಬುಕ್, ಉತ್ತರದ ಗಡಿ ಭಾಗಗಳು ಮತ್ತು ಅಲ್ ಜೌಫ್ ಪ್ರದೇಶಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಸಚಿವಾಲಯ ತಿಳಿಸಿದೆ. ಭಾರೀ ಗಾಳಿ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಳೆಯ ಸ್ಥಿತಿಗತಿ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಂದಾಗಿ ಜೆಡ್ಡಾದ ಕಿಂಗ್ ಅಬ್ದುಲಾಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ತಮ್ಮ ವಿಮಾನ ಸಂಚಾರದ ಅಪ್ ಡೇಟ್ಸ್ ಅನ್ನು ಪರಿಶೀಲಿಸುತ್ತಿರಲು ಸಲಹೆ ನೀಡಿದೆ.