ಬಾರ್ಡರ್‌ ಗಾವಸ್ಕರ್‌ ಟ್ರೋಫಿ: ಸೋಲನುಭವಿಸಿದ ಭಾರತ, ದಶಕದ ಬಳಿಕ ಟ್ರೋಫಿ ತನ್ನದಾಗಿಸಿಕೊಂಡ ಆಸ್ಟ್ರೇಲಿಯಾ

Border Gavaskar Trophy: India Defeated, Australia Win Trophy After Decade

ಸಿಡ್ನಿ 08: ಭಾರತ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಆರು ವಿಕೆಟ್‌ ಅಂತರದ ಸೋಲನುಭವಿಸಿದೆ.  ಆಸ್ಟ್ರೇಲಿಯಾ 3-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಇದರೊಂದಿಗೆ ಬಾರ್ಡರ್‌ ಗಾವಸ್ಕರ್‌ ಟ್ರೋಫಿಯು ದಶಕದ ಬಳಿಕ  ಆಸ್ಟ್ರೇಲಿಯಾದ ಪಾಲಾಗಿದೆ.


ಭಾರತ ನೀಡಿದ 162 ರನ್‌ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು ನಾಲ್ಕು ವಿಕೆಟ್‌ ಕಳೆದುಕೊಂಡು 27 ಓವರ್‌ ಗಳಲ್ಲಿ ಜಯ ಸಾಧಿಸಿತು.

ಆರು ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದ್ದಲ್ಲಿಂದ ಮೂರನೇ ದಿನದಾಟದ ಬ್ಯಾಟಿಂಗ್‌ ಆರಂಭಿಸಿದ ಭಾರತವು 157 ರನ್‌ ಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಕೇವಲ ಏಳು ಓವರ್‌ ಗಳಲ್ಲಿ ಭಾರತವನ್ನು ಆಲೌಟ್‌ ಮಾಡುವಲ್ಲಿ ಆಸೀಸ್‌ ಬೌಲರ್‌ ಗಳು ಯಶಸ್ವಿಯಾದರು. 61 ರನ್‌ ಗಳಿಸಿದ ಪಂತ್‌ ಅವರದ್ದೇ ಗರಿಷ್ಠ ಗಳಿಕೆ. ಭಾರತವನ್ನು ಕಾಡಿದ ವೇಗಿ ಬೊಲ್ಯಾಂಡ್‌ ಆರು ವಿಕೆಟ್‌ ಕಿತ್ತರೆ, ನಾಯಕ ಕಮಿನ್ಸ್‌ ಮೂರು ವಿಕೆಟ್‌ ಪಡೆದರು. ಒಂದು ವಿಕೆಟ್‌ ವೆಬ್‌ಸ್ಟರ್ ಪಾಲಾಯಿತು.


ಗೆಲುವಿಗೆ 162 ರನ್‌ ಗುರಿ ಪಡೆದ ಆಸ್ಟ್ರೇಲಿಯಾ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್‌ ಗೆ ಮನ ಮಾಡಿತು. ಅದರಲ್ಲೂ ನಾಯಕ ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಗೆ ಇಳಿಯದೆ ಇದ್ದಿದ್ದು ಭಾರತಕ್ಕೆ ಮುಳುವಾಯಿತು.  ಭಾರತದ ಪರ ಪ್ರಸಿಧ್‌ ಕೃಷ್ಣ ಮೂರು ವಿಕೆಟ್‌ ಕಿತ್ತರೆ, ಸಿರಾಜ್‌ ಒಂದು ವಿಕೆಟ್‌ ಪಡೆದರು.