ಬೇಡಿಕೆಗಳ ಈಡೇರಿಕೆಗಾಗಿ ಆರೋಗ್ಯ ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರು ಪ್ರತಿಭಟನೆಗೆ ಸಜ್ಜು

ಬೆಂಗಳೂರು, ಮೇ 2,ಬೇಡಿಕೆಗಳ ಈಡೇರಿಕೆಗಾಗಿ ಆರೋಗ್ಯ ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರು ಪ್ರತಿಭಟನೆಗೆ ಇಳಿಯಲಿದ್ದಾರೆ.ಎರಡು  ಹಂತಗಳಲ್ಲಿ ಪ್ರತಿಭಟನೆ ಆಯೋಜಿಸಿದ್ದು, ಮೊದಲ ಹಂತದಲ್ಲಿ ಮೇ 7ರಿಂದ ಮೇ 21 ರವರೆಗೆ  ಹಾಗೂ ಮೇ 22 ರಿಂದ ಅನಿರ್ದಿಷ್ಟಾವಧಿಗೆ  ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ  ನಡೆಸಲಿದ್ದಾರೆ. ರಾಜ್ಯಾದ್ಯಂತ  ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು  ಪ್ರತಿಭಟನೆಗೆ  ಸಿದ್ಧರಾಗುವಂತೆ ಕರ್ನಾಟಕ ರಾಜ್ಯ ಆರೋಗ್ಯ ಹೊರಗುತ್ತಿಗೆ ನೌಕರರ ಸಂಘದ  ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಕರೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಆರೋಗ್ಯ  ಕ್ಷೇತ್ರದ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು ಮತ್ತು ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ  ನೀಡಿ ,ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರವು ನೀಡಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆಗೆ ಕರೆ ನೀಡಲಾಗಿದೆ.ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು  ನೀಡಿ, ಖಾಯಂಗೊಳಿಸಬೇಕು . ಎಲ್ಲಾ ಹುದ್ದೆಗಳನ್ನು  ಎನ್ . ಎಚ್ . ಎಮ್ ಕಾರ್ಯಕ್ರಮದ  ಹುದ್ದೆಗಳನ್ನು ಒಳಗೊಂಡಂತೆ  ಖಾಯಂ ಹುದ್ದೆಗಳಾಗಿ ಸೃಷ್ಟಿಸಬೇಕು ಹಾಗೂ ಏಪ್ರಿಲ್ 1 ,  ದಿನದ ವಿರಾಮವನ್ನು ರದ್ದುಪಡಿಸಿ ಆದೇಶ ನೀಡಬೇಕು. ಎಲ್ಲಾ ಹುದ್ದೆಗಳಿಗೆ ವೇತನ ಭತ್ಯೆಗಳು  ಮತ್ತು ವೇತನ ಶ್ರೇಣಿಯನ್ನು ನೀಡಿ , ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು . ಹರಿಯಾಣ  ಮಾದರಿಯಲ್ಲಿ Comprehensive HR Policy ರಚಿಸಬೇಕು ಮತ್ತು ವೈದ್ಯಕೀಯ ಶಿಕ್ಷಣ  ಇಲಾಖೆಯು ಜಾರಿ ಮಾಡಿರುವ ಏಕ ರೂಪ ವೇತನದ ಮಾದರಿಯಲ್ಲಿ ಎಲ್ಲಾ ನೌಕರರಿಗೂ ಜಾರಿ ಮಾಡಲು  ಕ್ರಮವಹಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಸಂಘ ಪ್ರತಿಭಟನೆ  ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.