ಬೆಂಗಳೂರು,
ಏ. 20, ರಾಜ್ಯ ಸರ್ಕಾರದ ನೇರ ಅಧೀನದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಮತ್ತು ಪಶು
ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಸೇವೆ ಸಲ್ಲಿಸುವ 4 ಮತ್ತು ಕೇಂದ್ರ ಸರ್ಕಾರದ
ಜವಾಹರಲಾಲ್ ನೆಹರು ಮುಂದುವರೆದ ಬೆಂಗಳೂರಿನ ಜಕ್ಕೂರಿನ ಅಧ್ಯಯನ ಸಂಶೋಧನಾ ಸಂಸ್ಥೆಯಲ್ಲಿ
ಲಭ್ಯವಿರುವ ಯಂತ್ರೋಪಕರಣಗಳು, ಪ್ರಯೋಗಾಲಯಗಳು ಮತ್ತು ತಜ್ಞ ವಿಜ್ಞಾನಿಗಳ ಸೇವೆಯನ್ನು
ಕೋವಿಡ್-19 ತಪಾಸಣೆಗಳನ್ನು ಮಾಡಲು ಸಮರ್ಪಕವಾಗಿ ಬಳಕೆ ಮಾಡಲು ತಕ್ಷಣ ಕ್ರಮ
ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಜಿ ಸಚಿವ ಹಾಗೂ ಗದಗ ಶಾಸಕ
ಎಚ್.ಕೆ.ಪಾಟೀಲ ಅವರಿಗೆ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿಯವರ
ಅಧಿಕೃತ ನಿವಾಸದಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾದ ಎಚ್.ಕೆ.ಪಾಟೀಲರು
ಕೋವಿಡ್-19ರ ತಪಾಸಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಹಲವಾರು ಅಂಶಗಳನ್ನು
ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಖ್ಯಮಂತ್ರಿಯವರ ಭೇಟಿಯ ಸಂದರ್ಭದಲ್ಲಿ
ಉಪಮುಖ್ಯಮಂತ್ರಿ, ಡಾ. ಅಶ್ವತ್ ನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ
ಸಹ ಉಪಸ್ಥಿತರಿದ್ದರು.ಈ ಎಲ್ಲಾ ಅಂಶಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ
ಮುಖ್ಯಮಂತ್ರಿಗಳು ಎಚ್.ಕೆ.ಪಾಟೀಲರ ಪತ್ರದಲ್ಲಿ ರಚನಾತ್ಮಕ ಸಲಹೆಗಳ ಬಗ್ಗೆ ಕ್ರಮ
ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಮ್ಮ ಭೇಟಿಯ ಸಂದರ್ಭದಲ್ಲಿ 3 ಪುಟಗಳ ವಿವರವಾದ
ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿದ ಪಾಟೀಲರು, ಕೋವಿಡ್-19ರಲ್ಲಿ ಈ ರೋಗದ
ನಿಯಂತ್ರಣ ಮತ್ತು ಹರಡುವಿಕೆಯನ್ನು ತಡೆಗಟ್ಟಲು ತಪಾಸಣೆ ಮತ್ತು ಪ್ರತ್ಯೇಕಿಸುವಿಕೆ
ಸಿದ್ಧ ಔಷಧಗಳು ಎಂಬುದನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು.ಕರ್ನಾಟಕದಲ್ಲಿ
ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆಗಳಾಗುತ್ತಿಲ್ಲ. 7500ಕ್ಕೂ ಹೆಚ್ಚು ತಪಾಸಣೆಯ
ಫಲಿತಾಂಶಗಳು ಬಾಕಿ ಇವೆ. ಒಂದೊಂದು ತಪಾಸಣಾ ಕೇಂದ್ರದಲ್ಲಿ ಕನಿಷ್ಠ 100-500
ಪ್ರಕರಣಗಳನ್ನು ತಪಾಸಣೆ ಫಲಿತಾಂಶ ಬಾಕಿ ಇದೆ ಎಂದು ಗಮನಕ್ಕೆ ತರಲಾಯಿತು.“ನಮ್ಮ
ಕರ್ನಾಟಕದಲ್ಲಿಯೂ ಸಹ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಾ ಜನತೆ ಆತಂಕದ
ಕ್ಷಣಗಳಲ್ಲಿ ದಿನ ದೂಡುವಂತೆ ಸ್ಥಿತಿ ಗಂಭೀರಗೊಂಡಿದೆ. ಆದರೆ ಅಗತ್ಯದ ತಪಾಸಣೆಗಳನ್ನು
ಕೈಗೊಳ್ಳದೇ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ ಮತ್ತು ಈ ಹರಡುವಿಕೆಯನ್ನು
ನಿಯಂತ್ರಿಸಲಾಗಿದೆ ಎಂಬ ಸುದ್ದಿಯನ್ನು ಹರಡುತ್ತಾ ತನ್ಮೂಲಕ ವ್ಯರ್ಥ ಸಾಹಸವನ್ನು
ಸಂಘಟಿತವಾಗಿ ಮಾಡುತ್ತಿದ್ದಾರೆ. ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವಂತಹ
ಇಂಥ ವಿಷಯಗಳಲ್ಲಿ ತೀರಾ ನಿರ್ಲಕ್ಷ್ಯಗಳಿಂದ ಸ್ಪಂದಿಸುತ್ತಿರುವುದು ದಿನ ಕಳೆದಂತೆ
ಗೋಚರವಾಗುತ್ತಿದೆ. ಇದರಿಂದ ಕರ್ನಾಟಕದ ನಾಗರೀಕರಿಗೂ ಮತ್ತು ವಿಶೇಷವಾಗಿ ಜನತೆಯ
ಕಾಳಜಿಯುಳ್ಳವರಿಗೆ ತೀವ್ರ ನೋವಾಗಿದೆ” ಎಂದು ಪಾಟೀಲರು ಮುಖ್ಯಮಂತ್ರಿಯವರಿಗೆ ನೋವು
ಮತ್ತು ವಿಷಾದದಿಂದ ತಿಳಿಸಿದರು.
“ಕರ್ನಾಟಕದಲ್ಲಿ ಈಗ ಗಂಟಲು ದ್ರವ ಮತ್ತು ರಕ್ತದ
ಮಾದರಿ ಸಂಗ್ರಹಿಸಿದ ಇನ್ನೂ ಸುಮಾರು 5000ಕ್ಕೂ ಹೆಚ್ಚು ಪ್ರಕರಣಗಳ ತಪಾಸಣೆ ಫಲಿತಾಂಶ
ಲಭ್ಯವಾಗಬೇಕಿದೆ. ಏಪ್ರಿಲ್-12ರ ನಂತರ ಮಾದರಿ ಸಂಗ್ರಹಿಸಿರುವ ಬಹುದೊಡ್ಡ ಪ್ರಮಾಣದ
ಮಾದರಿಗಳ ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಇಂಥ ಸಂದರ್ಭದಲ್ಲಿ ಈ ತಪಾಸಣೆಗಳು
ಪೂರ್ಣಗೊಂಡು ಫಲಿತಾಂಶ ಪ್ರಕಟವಾಗವುದು ಅತ್ಯವಶ್ಯವಾಗಿದೆ. ಈ ಫಲಿತಾಂಶಗಳು
ಪ್ರಕಟವಾದಲ್ಲಿ ಈಗಿರುವ 401ಕ್ಕೂ ಹೆಚ್ಚು ಕೋವಿಡ್-19 ಸಕಾರಾತ್ಮಕ ಪ್ರಕರಣಗಳು ಎರಡು
ಅಥವಾ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದ ರೋಗ ಹರಡುವಿಕೆಯ ಪ್ರಮಾಣ
ನಿರ್ಧರಿಸಲು ಮತ್ತು ತಡೆಗಟ್ಟುವ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಪಾಟೀಲರು
ವಿವರಿಸಿದರು.
“ಪಿಪಿಇ ಕಿಟ್‌ಗಳ ಪೂರೈಕೆ ಕುರಿತಂತೆ ನಾನು ತಮ್ಮೊಂದಿಗೆ ಹಲವಾರು
ಬಾರಿ ಪ್ರಸ್ತಾಪಿಸಿದ್ದೆ. ದಿನಾಂಕ 5.4.2020 ರಂದು ತಾವು ವೈಯಕ್ತಿಕವಾಗಿ ಕರೆ
ಮಾಡಿದಾಗ ಮತ್ತು ತದನಂತರ ರಾಜ್ಯದ ಮುಖ್ಯಕಾರ್ಯದರ್ಶಿಯವರು ನನಗೆ ದೂರವಾಣಿಯಲ್ಲಿ
ಮಾತನಾಡಿದಾಗ ವಾಸ್ತವಿಕತೆಯಿಂದ ದೂರ ಮತ್ತು ಮಾಹಿತಿ ಕೊರತೆ ಅಥವಾ ಮಾಹಿತಿಯನ್ನು
ಉದ್ದೇಶಪೂರ್ವಕವಾಗಿ ಅಧಿಕಾರಶಾಹಿ ಸಾರ್ವಜನಿಕರಿಗೆ ಹಂಚಿಕೊಳ್ಳದೇ ಇರುವ ಬಗ್ಗೆ
ತಿಳಿಸಿದ್ದೆ. ಮುಖ್ಯಕಾರ್ಯದರ್ಶಿಯವರು ನನ್ನೊಂದಿಗಿನ ಸಂಭಾಷಣೆಯ ಕಾಲಕ್ಕೆ
ಕರ್ನಾಟಕಕ್ಕೆ ರಾಪಿಡ್ ಟೆಸ್ಟ್ ಗಾಗಿ ಕಿಟ್‌ಗಳು ದಿನಾಂಕ 11. ಬರಲಿವೆ ಎಂದು
ತಿಳಿಸಿದರು. ಆದರೆ ದಿನಾಂಕ 17.4.2020ರ ಸಂಜೆವರೆಗೂ ಈ ಕಿಟ್ಗಳು ಬರಲಿಲ್ಲ. ಇನ್ನೂ
ಟೆಸ್ಟ್ ಆರಂಭವಾಗಿಲ್ಲ ಎಂದು ಹೇಳಲಾಗಿದೆ” ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ಇಷ್ಟೆಲ್ಲಾ ಆದರೂ ಕ್ರಮ ಕೈಗೊಳ್ಳದೇ ಇರುವುದರಿಂದ ಕರ್ನಾಟಕದ ನಾಗರೀಕರ ಮೇಲೆ ಗಂಭೀರವಾದ
ದುಷ್ಪರಿಣಾಮಗಳಾಗುವ ನಿರೀಕ್ಷೆ ಇದೆ ಎಂದು ಪಾಟೀಲರು ಕಳವಳ ವ್ಯಕ್ತಪಡಿಸಿದರು.
“ವಿಳಂಬದ್ರೋಹ
ಅಂತ್ಯಗಾಣಿಸಿ. ನ್ಯಾಯಯುತ ತಕ್ಷಣದ ತೀರ್ಮಾನಗಳತ್ತ ಗಮನಹರಿಸಿ. ಸಭೆಗಳನ್ನು ಕೇವಲ
ಸಮಾಲೋಚನೆಗೆ ಮಾಡಬೇಡಿ. ಗಟ್ಟಿಯಾದ ನಿರ್ಣಯಗಳನ್ನು ಕೈಗೊಳ್ಳಿ. ಸಮರೋಪಾದಿಯಲ್ಲಿ ಕ್ರಮ
ಕೈಗೊಳ್ಳಬೇಕೆಂಬ ಪದಗಳ ಅರ್ಥವನ್ನು ನಮ್ಮ ಆಡಳಿತ ಯಂತ್ರಕ್ಕೆ ಒಮ್ಮೆ ತಿಳಿಸಿಕೊಡಿ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 1 ಅಥವಾ 2 ದಿನಗಳಲ್ಲಿ ತಪಾಸಣಾ ಕೇಂದ್ರಗಳು
ಕಾರ್ಯನಿರ್ವಹಿಸುವಂತೆ ಮಾಡಿ. ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಕೊಡಿ” ಎಂದು
ಪಾಟೀಲರು ಒತ್ತಾಯಿಸಿದರು.