ಅಶೋಕ್ ಪೂಜಾರಿಗೆ ಸಚಿವರಾಗುವ ಯೋಗ್ಯತೆ ಇದೆ ಎಂದ ಎಚ್.ಡಿ.ಕುಮಾರಸ್ವಾಮಿ

HD Kumaraswamy

ಬೆಳಗಾವಿ,  ಡಿ. 1-ಗೋಕಾಕ್‌ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅವರಿಗೆ ಭವಿಷ್ಯದಲ್ಲಿ  ಮಂತ್ರಿಯಾಗುವ ಯೋಗವಿದೆ ಎಂದು  ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ.

ಭಾನುವಾರ ಗೋಕಾಕ್‌ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅಶೋಕ್ ಪೂಜಾರಿ ಪರ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡು ಮತಯಾಚಿಸಿದರು.

ಇಲ್ಲಿನ  ಮಮದಾಪುರ ಗ್ರಾಮದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅನರ್ಹರ ನಾಯಕರಾಗಿದ್ದು,  ಮೈತ್ರಿ ಸರ್ಕಾರದ ಪತನದಲ್ಲಿ ಅವರದ್ದು ಪ್ರಮುಖ ಪಾತ್ರ. ಸಭ್ಯ ಅಶೋಕ್ ಪೂಜಾರಿ  ಮತ್ತೊಮ್ಮೆ ನಿಮ್ಮ ಮುಂದೆ ನಿಂತಿದ್ದಾರೆ. ಕಳೆದ ಬಾರಿ ಸೋಲಿಸಿ ಅನ್ಯಾಯಮಾಡಿದಂತೆ ಈ ಬಾರಿ  ಮಾಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ ಕುಮಾರಸ್ವಾಮಿ, ಅಶೋಕ್ ಪೂಜಾರಿ ಅವರನ್ನು  ಬಹುಮತದಿಂದ ಗೆಲ್ಲಿಸಿ ಶಾಸಕರನ್ನಾಗಿ ಮಾಡಿ. ಮುಂದೆ ಅವರಿಗೆ ಸಚಿವರಾಗುವ ಯೋಗವಿದೆ. ಬಹಿರಂಗ ಪ್ರಚಾರದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಸುಳಿವು ನೀಡಿದರು.

ರಾಜ್ಯ ರಾಜಕಾರಣದ ಪ್ರತಿ ಘಟನೆಗಳನ್ನು ಮತದಾರರು ಗಮನಿಸುತ್ತಿದ್ದಾರೆ. ದೇಶದ  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ  ಬುಡಮೇಲು ಮಾಡಿದೆ. ಆಪರೇಷನ್ ಕಮಲ  ಭ್ರಷ್ಟಾಚಾರದ ಮೂಲಕ ಶಾಸಕರು ರಾಜೀನಾಮೆ ಕೊಡುವಂತೆ ಮಾಡಿ ಮತ್ತೆ ಜನತೆಯೆ ಮೇಲೆ ಚುನಾವಣೆ  ಹೊರೆ ಹಾಕಿದ್ದಾರೆ. ಈ ಉಪಚುನಾವಣೆ ರಾಜ್ಯಕ್ಕೆ ಅವಶ್ಯಕತೆಯೇ ಇರಲಿಲ್ಲ. ಮತದಾರರು ಅನರ್ಹ ಶಾಸಕರನ್ನೆಲ್ಲ ತಿರಸ್ಕಾರ ಮಾಡಬೇಕು. ಗೋಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿಯವರಿಗೆ ಆಶಿರ್ವಾದ ಮಾಡಬೇಕು ಎಂದರು.

ದೇಶದ  ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೈತ್ರಿ ಸರ್ಕಾರದಲ್ಲಿ ತಾವು ಅತಿಹೆಚ್ಚು ರೈತರ  ಸಾಲಮನ್ನಾ ಮಾಡಿದ್ದು, ಲಕ್ಷಾಂತರ ಅನ್ನದಾತರಿಗೆ ನೆರವಾಗಿದೆ‌. ಬೆಳಗಾವಿ ಜಿಲ್ಲೆಯಲ್ಲಿ  ನೆರೆ ಪರಿಸ್ಥಿತಿಯನ್ನು ತಾವು ಕಣ್ಣಾರೆ ಕಂಡಿದ್ದು ಪಕ್ಷದ ಮುಖಂಡರು ಶಾಸಕರು ಉತ್ತರ  ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ಸಹಕರಿಸಿದ್ದನ್ನು ಸ್ಮರಿಸಿದರು.

ಅಲ್ಪಸಂಖ್ಯಾತರು,  ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ್ದು ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು  ಮಾಡುವ ಚಿಂತನೆಯಿತ್ತು. ಅಷ್ಟರೊಳಗೆ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ‌  ಕೆಳಗಿಳಿಸಲಾಯಿತು. ಈ ಭಾಗದ ಸಾಹುಕಾರರಿಗೆ ಕ್ಷೇತ್ರದ ಜನರು ನೆರೆ ಸಂತ್ರಸ್ತರಿಗಿಂತ  ಅಧಿಕಾರವೇ ಹೆಚ್ಚಾಗಿ ಹೋಯಿತು ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕುಮಾರಸ್ವಾಮಿ  ಕಿಡಿಕಾರಿದರು‌‌.