ಚಿತ್ರದುರ್ಗ, ಮೇ 5, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಜಾರಿಗೊಳಿಸಿರುವ ‘ಅಂತರ್ಜಲ ಚೇತನ’ ಯೋಜನೆಯಡಿ ಜಿಲ್ಲೆಯ ಜಲಮೂಲಗಳ ಸಂರಕ್ಷಣೆ ಹಾಗೂ ಜಲಚಕ್ರ ವ್ಯವಸ್ಥೆ ಸುಧಾರಣೆಗಾಗಿ 270 ಕೋಟಿ ರೂ. ಗಳ ವೆಚ್ಚದಲ್ಲಿ ಸುಮಾರು 46 ಸಾವಿರ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ ಎಂದು ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಅಂತರ್ಜಲ ಚೇತನ’ ಯೋಜನೆಯ ಕುರಿತು ಪಿಡಿಒ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೆರವಿನೊಂದಿಗೆ ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗಾಗಿ ‘ಅಂತರ್ಜಲ ಚೇತನ’ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದ್ದು, ಅಂತರ್ಜಲ ಮಟ್ಟ ಸುಧಾರಣೆಗಾಗಿ ಸಾಕಷ್ಟು ತಜ್ಞರು ಅಧ್ಯಯನ ನಡೆಸಿ, ವರದಿ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಪಾಲಿಗೆ ಈ ಯೋಜನೆ ವರದಾನವಾಗಲಿದೆ. ಈ ವರ್ಷ ಜಿಲ್ಲೆಯಲ್ಲಿ 270 ಕೋಟಿ ರೂ. ವೆಚ್ಚದಲ್ಲಿ ಜಲಸಂರಕ್ಷಣೆಗೆ ಸಂಬಂಧಿಸಿದ ಸುಮಾರು 46 ಸಾವಿರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಪ್ಪಾರೆಡ್ಡಿ ಹೇಳಿದರು.ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಂತರ್ಜಲ ಚೇತನ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ, ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದರು.
ಅಂತರ್ಜಲ ಚೇತನ ಯೋಜನೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಿದ, ಆರ್ಟ್ ಆಫ್ ಲಿವಿಂಗ್ನ ಕಾರ್ಯಾಚರಣೆ ನಿರ್ದೇಶಕ ರವೀಂದ್ರ ದೇಸಾಯಿ, ಈ ಭಾಗದಲ್ಲಿ ಚಿತ್ರದುರ್ಗ, ಚಳ್ಳಕೆರೆ, ಪಾವಗಡ, ಶಿರಾ ಪ್ರದೇಶಗಳು ಬರಡು ಪ್ರದೇಶವಾಗಿದ್ದು, ಇಲ್ಲಿ ಅಂತರ್ಜಲ ಮಟ್ಟ ತೀರ ಕೆಳಕ್ಕೆ ಕುಸಿದಿದೆ. ಈ ಮೊದಲು ಪ್ರಕೃತಿಯೇ ಮಳೆ ನೀರಿನ ಜಲಮರುಪೂರಣ ಮಾಡುತ್ತಿತ್ತು. ಆದರೆ ಕಾಡಿನ ನಾಶ ಹಾಗೂ ಪ್ರಕೃತಿ ಮೇಲೆ ಮನುಷ್ಯನ ಪ್ರಭಾವ ಹೆಚ್ಚಾದ ಕಾರಣದಿಂದಾಗಿ, ಜಲಮೂಲಗಳನ್ನು ನಾವೇ ಸಂರಕ್ಷಿಸುವ ಅಗತ್ಯತೆ ಬಂದಿದೆ ಎಂದರು.ಅಂತರ್ಜಲ ಚೇತನ ಯೋಜನೆಯಡಿ ಓಡುವ ನೀರನ್ನು ನಿಲ್ಲಿಸುವಂತೆ ಹಾಗೂ ನಿಂತ ನೀರನ್ನು ಇಂಗಿಸುವ ಕಾರ್ಯ, ಇಡೀ ಜಲಾನಯನ ಪ್ರದೇಶದಲ್ಲಿ ನೀರನ್ನು ಇಂಗಿಸುವುದು, ಭೂಮಿಯ ಸವಕಳಿ ತಡೆಯುವ ಕಾರ್ಯವನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗುವುದು. ಇದಕ್ಕೆ ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಅಂತರ್ಜಲಕ್ಕೂ, ಮೇಲ್ಮೈ ನೀರು ಹರಿಯುವಿಕೆಗೂ ಒಂದಕ್ಕೊಂದು ಸಂಬಂಧವಿದೆ, ನದಿಯ ಹರಿಯುವಿಕೆ ಆಧಾರದಲ್ಲಿ ಅಂತರ್ಜಲವೂ ಇದೆ. ಸದ್ಯ ಕೆರೆಗಲಲ್ಲಿ ನೀರಿನ ಆವಿಯ ಪ್ರಮಾಣ ಹೆಚ್ಚಿದ್ದು, ಈ ಭಾಗದಲ್ಲಿ ಪ್ರಕೃತಿಗೆ ಮೋಡಗಳನ್ನು ತಡೆದು, ಮಳೆ ಸುರಿಸುವ ಶಕ್ತಿ ಕುಸಿದಿದೆ. ಹೀಗಾಗಿ ಜಲಚಕ್ರ ವ್ಯವಸ್ಥೆ ಏರುಪೇರಾಗಿದೆ. ಈಗಾಗಲೆ ಅಂತರ್ಜಲ ಚೇತನ ಯೋಜನೆಗೆ ಗ್ರಾಮ ಪಂಚಾಯತಿ ವಾರು ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಸಂಯೋಜಕರನ್ನು ನೇಮಿಸಿಕೊಳ್ಳಲಾಗಿದೆ, ಅಲ್ಲದೆ ಕಾಯಕಬಂಧುಗಳನ್ನು ನಿಯೋಜಿಸಲಾಗಿದೆ ಎಂದರು.
ಯೋಜನೆಯ ಜಾರಿಯಿಂದ ಜಿಲ್ಲೆಯಲ್ಲಿ ಜಲಸಂರಕ್ಷಣೆಯ ಜೊತೆಗೆ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಶೀಘ್ರದಲ್ಲಿಯೇ ಯೋಜನೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಪ್ರಾರಂಭಿಸಲಾಗುವುದು ಎಂದರು.ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬ, ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒ ಗಳು ಭಾಗವಹಿಸಿದ್ದರು.