ಬೆಳಗಾವಿ 15: ಜಿಂದಾಲ್‌ನಿಂದ ಮೀರಜ್‌ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎರಡು ಭೋಗಿಗಳು ಹಳಿತಪ್ಪಿ ಪಲ್ಟಿಯಾಗಿರುವ ಘಟನೆ ಬೆಳಗಾವಿಯ ಮಿಲಿಟರಿ ಮಹಾದೇವ ದೇವಸ್ಥಾನದ ಬಳಿ ಇರುವ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ.
ಜಿಂದಾಲ್ ಕಾರಖಾನೆಯ ಕಬ್ಬಿಣದ ಅದಿರು ತುಂಬಿಕೊಂಡು ಮಿರಜ್‌ಗೆ ಹೊರಟಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಸುಮಾರು 3ರಿಂದ 4 ಗಂಟೆವರೆಗೆ ದುರಸ್ತಿ ಕಾರ್ಯ ನಡೆಯಿತು. ಬೆಳಗಾವಿ-ಮಿರಜ್ ಮಾರ್ಗದಲ್ಲಿ ಎಲ್ಲಾ ರೈಲುಗಳು ಸಂಚಾರ ಸ್ಥಗಿತಗೊಂಡಿದೆ. ಹಳಿಯ ದುರಸ್ತಿ ಕಾರ್ಯ ಮುಗಿದ ಬಳಿಕವೇ ರೈಲು ಆರಂಭಗೊಂಡಿತು. ಮಿರಜ್‌ನಿಂದ ಬರುತ್ತಿದ್ದ ಚಾಲುಕ್ಯ ಶರಾವತಿ ಎಕ್ಸ್‌ಪ್ರೆಸ್, ಎಲ್‌ಟಿಟಿ ದಾದರ್, ಅಜ್ಮೇರ್ ಎಕ್ಸ್‌ಪ್ರೆಸ್ ಮಾರ್ಗ ಮಧ್ಯದಲ್ಲಿಯೇ ನಿಂತುಕೊಂಡಿದ್ದವು.
ಬೆಳಗಾವಿಯಿಂದ ಹೊರಟಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್, ಬೆಂಗಳೂರು ಜೋದ್ಪುರ ಎಕ್ಸ್‌ಪ್ರೆಸ್, ಬೆಂಗಳೂರಿಂದ ಭಗತ್ ಕೋಟಿ, ಕ್ಯಾಸಲ್ ರಾಕ್-ಮಿರಜ್ ಪ್ಯಾಸೆಂಜರ್, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.