ಸಂಭ್ರಮದ ಬೀರದೇವರ ಜಾತ್ರಾ ಉತ್ಸವದಲ್ಲಿಸುಣ್ಣ, ಬಣ್ಣದ ಚಿತ್ತಾರ,
ಯರಗಟ್ಟಿ, 15: ಸ್ಥಳೀಯ ಭಂಡಾರುಮಯ ಬೀರದೇವರ ಜಾತ್ರಾ ಉತ್ಸವದಲ್ಲಿ ಇಡೀ ಪಟ್ಟಣದ ಪರಿಸರವೆಲ್ಲಾ ಸುಣ್ಣ, ಬಣ್ಣದ ಚಿತ್ತಾರ, ವರ್ಣರಂಜಿತ ಸಡಗರ, ಸಂಭ್ರಮದ ಛಾಯೆ ಆವರಿಸಿತ್ತು. ಬಹುತೇಕ ಮನೆಗಳು ಜಾತ್ರೆಗೆ ಬಂದ ಭಕ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಭಂಡಾರದ ಭವ್ಯತೆಯಲ್ಲಿ ಮಿಂದೆದ್ದ ಅಪಾರ ಭಕ್ತ ಸಮೂಹ ಜಾತ್ರೆಯ ಸಂಭ್ರಮ, ಸಡಗರದ ಉತ್ಸವದಲ್ಲಿ ತಲ್ಲೀನರಾಗಿದ್ದರು.
‘ಚಾಂಗ ಭಲೇರೆ ’ ಎಂಬ ಭಕ್ತಿ, ಭಾವದ ಹರ್ಷೋಧ್ಘಾರದಲ್ಲಿ ಭಂಡಾರದ ಬಣ್ಣದಲ್ಲಿ ಮಿಂದೆದ್ದ ಭಕ್ತ ಸಮೂಹ ಇಡೀ ಗ್ರಾಮದ ಪರಿಸರವನ್ನೇ ಸಂಪೂರ್ಣ ಹಳದಿಮಯ ಆಕಾರಕ್ಕೆ ಪರಿವರ್ತಿಸಿತ್ತು. ಪ್ರತಿ ವರ್ಷವೂ ಭಂಡಾರು ಎರಚಾಟದಂತಹ ವಿಶಿಷ್ಟ ಆಚರಣೆ ಪಟ್ಟಣದಲ್ಲಿ ಒಂದೇ ಎಂಬುದು ವಿಶೇಷ.ಪ್ರಸಿದ್ಧ ಭಂಡಾರ ಜಾತ್ರೆ ಎಂಬ ಹೆಗ್ಗಳಿಕೆ ಈ ಗ್ರಾಮಕ್ಕಿದೆ. ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳ ಹಾಲುಮತ ಸಮುದಾಯದ ಭಕ್ತರು ಈ ಬೀರದೇವರ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಿಸುವುದು ಸಂಪ್ರದಾಯ. ಈ ಬೀರದೇವರ ಜಾತ್ರಾ ಉತ್ಸವದಲ್ಲಿ ಅಪಾರ ಭಕ್ತರು, ಶ್ರದ್ಧಾಭಕ್ತಿ ಹಾಗೂ ಭಂಡಾರ ಎರಚಾಟದ ಆರಾಧನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಜಾತ್ರೆಯ ವೈಶಿಷ್ಟತೆ.ಪ್ರತಿ ಮನೆ- ಮನದಲ್ಲಿ ಜಾತ್ರೆಯ ಹರ್ಷದ ಹೊನಲು, ಸಂತಸದ ಘಳಿಗೆಯಲ್ಲಿ ಜಾತ್ರೆಯ ರಸಪೂರಿ ಭೋಜನದ ಸವಿರುಚಿ ಸವಿದು, ಪರಸ್ಪರ ಭಂಡಾರ ಎರಚಾಟದಲ್ಲಿ ಪಾಲ್ಗೊಂಡ ಬಂಧುಗಳು, ಸ್ನೇಹಿತರು ಹಾಗೂ ಅನೇಕ ಹಳ್ಳಿ, ಪಟ್ಟಣಗಳಿಂದ ಆಗಮಿಸಿದ್ದ ಅಪಾರ ಭಕ್ತರು ಇಡೀ ಜಾತ್ರೆಗೆ ಮೆರುಗು ತುಂಬಿದ್ದು ಕಂಡು ಬಂದಿತು.
ಜಾತ್ರೆಗೆ ಮುನ್ನ ಸಂಪ್ರದಾಯದ ಪ್ರಕಾರ ಭರಮದೇವರ ಹಬ್ಬ, ಪಲ್ಲಕ್ಕಿ ಉತ್ಸವ, ವಾಹನೋತ್ಸವ, ದೀಪೋ ತ್ಸವ, ಪುಷ್ಪ ಪೂಜೆ ಹಾಗೂ ಡೊಳ್ಳಿನ ಪದಗಳ ಭರಾಟೆಯ ಜೊತೆಗೆ ಭಂಡಾರ ಒಡೆಯುವ ಆಚರಣೆ ಸೇರಿದಂತೆ ಐದು ದಿನಗಳವರೆಗೆ ಜಾತ್ರೆಗೆ ಸಂಭ್ರಮ ಮನೆ ಮಾಡಿತ್ತು.ಜಾತ್ರೆಯ ವಿಶೇಷತೆಯಾಗಿ ಡೊಳ್ಳು ಕುಣಿತ, ವಿವಿಧ ಬಗೆಯ ಹಲವು ಮನರಂಜನೆ ಕಾರ್ಯಕ್ರಮ ಮತ್ತು ಭಕ್ತಾದಿಗಳ ಭಂಡಾರ ಎರೆಚಾಟದ ಸಂಭ್ರಮದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಹೊಸ ಬಗೆಯ ಕಳೆ ಮೂಡಿಸಿತ್ತು. ಜಾತ್ರೆಗೂ ಮೊದಲು ಭಕ್ತ ಪರಿವಾರ ಬೀರ ದೇವರಿಗೆ ಹರಕೆ ತಿರಿಸುವುದು, ವಿಶೇಷ ಪೂಜೆ ಪುನಸ್ಕಾರ ನಡೆದವು. ಇತ್ತ ಭಕ್ತ ಪರಿವಾರ ಬೀರದೇವರ ಉನ್ಮಾದದಲ್ಲಿ ಪರಸ್ಪರ ಭಂಡಾರ ಎರಚುತ್ತ ಜಾತ್ರೆಯ ಸಂಭ್ರಮ, ಸಡಗರದ ಆಚರಣೆಯಲ್ಲಿ ಮಿಂದೆದ್ದರು.