ಬೆಳಗಾವಿ 15: ರಕ್ತನಾಳಗಳು ಮುದುಡಿಕೊಂಡು ಮೆದುಳಿಗೆ ರಕ್ತ ಸಂಚಾರವನ್ನು ತಡೆಹಿಡಿಯುವ ಮೋಯಾ ಮೋಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಈ ಭಾಗದಲ್ಲಿಯೇ ಪ್ರಥಮವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.
ತಲೆನೋವು, ಮುಖ, ತೋಳು ಅಥವಾ ಕಾಲಿನಲ್ಲಿ ದೌರ್ಬಲ್ಯದಿಂದ ಬಳಲುತ್ತಿದ್ದ ರಾಯಭಾಗ ತಾಲೂಕಿನ ಬಿರಡಿ ಗ್ರಾಮದ 40 ವರ್ಷದ ಮಹಿಳೆಯು ಆಸ್ಪತ್ರೆಗೆ ಆಗಮಿಸಿದಾಗ, ಸಮಗ್ರವಾಗಿ ತಪಾಸಣೆಗೊಳ್ಪಡಿಸಲಾಯಿತು. ಆಗ ಮೋಯಾ ಮೋಯಾ ಎಂಬ ಖಾಯಿಲೆಯಿಂದ ಬಳಲುತ್ತಿರುವದು ಕಂಡು ಬಂದಿತು. ತಡಮಾಡಿದರೆ ಜೀವಕ್ಕೆ ಅಪಾಯ ಬಂದೆರುವ ಸಾಧ್ಯತೆಯನ್ನು ಅರಿತ ವೈದ್ಯರು ಶೀಘ್ರವೇ ಶಸ್ತ್ರಕ್ರಿಯೆ ನೆರವೇರಿಸಲು ಸಜ್ಜಾದರು. ಸುಮಾರು 6 ಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಕೇವಲ ಮೂರೆ ದಿನದಲ್ಲಿ ರೋಗಿಯು ಚೇತರಿಸಿಕೊಂಡರು.
ಮೋಯಾ ಮೋಯಾ ಎಂಬುದು ಅಪರೂಪದ ರಕ್ತನಾಳ ಕಾಯಿಲೆಯಾಗಿದ್ದು, ಮೆದುಳಿನಲ್ಲಿರುವ ರಕ್ತನಾಳಗಳು, ಮುದುಡಿಕೊಂಡು ಮೆದುಳಿಗೆ ರಕ್ತಸಂಚಾರದಲ್ಲಿ ತೊಂದರೆಯನ್ನುಂಟು ಮಾಡುತ್ತವೆ. 1960ರ ದಶಕದಲ್ಲಿ ಈ ಖಾಲಯಿಲೆಯನ್ನು ಜಪಾನ್ನಲ್ಲಿ ಕಂಡು ಹಿಡಿದರೆ, ಭಾರತದಲ್ಲಿ 1983 ರಲ್ಲಿ ಕಂಡುಬಂದಿತು. ಮೋಯಾ ಮೋಯಾ ಎಂಬುದು ಜಪನೀಸ್ ಭಾಷೆಯಾಗಿದೆ. ಈ ಖಾಯಿಲೆಯಿಂದ ಬಳಲುತ್ತಿರುವವರಲ್ಲಿ ಮುಖ್ಯವಾಗಿ ಪಾರ್ಶ್ವವಾಯು, ರಕ್ತಸ್ರಾವ, ಮರೆಗುಳಿತನ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ವಯಸ್ಕರಲ್ಲಿ ಮೋಯಾ ಮೋಯಾ ಕಾಯಿಲೆ ಬಹಳ ಅಪರೂಪವಾಗಿದ್ದು, ಮೆದುಳಿಗೆ ರಕ್ತ ಪೂರೈಕೆಯ ನಾಳವನ್ನು ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ. ನಾಶಗೊಂಡ ರಕ್ತನಾಳಕ್ಕೆ ಪರ್ಯಾಯವಾಗಿ ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ನೇರವಾದ ಹೊಸ ರಕ್ತನಾಳವನ್ನು ಸೃಷ್ಠಿಸಿ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗುತ್ತದೆ ಎಂದು ಆಸ್ಪತ್ರೆಯ ನರಶಸ್ತ್ರಚಿಕಿತ್ಸಕರಾದ ಡಾ. ಅಭಿಷೇಕ ಪಾಟೀಲ ಅವರು ಹೇಳುತ್ತಾರೆ.
ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಅಭಿಷೇಖ ಪಾಟೀಲ ಅವರಿಗೆ ಅರವಳಿಕೆ ತಜ್ಞವೈದ್ಯರಾದ ಡಾ. ಟೀನಾ ದೇಸಾಯಿ, ಸ್ಥಾನಿಕ ವೈದ್ಯರಾದ ಡಾ. ಆದಿತ್ಯಾ ಅವರು ಸಹಕರಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಅಭಿಷೇಕ ಪಾಟೀಲ ಹಾಗೂ ಅವರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.