ಶೋಭಾ ಕರಂದ್ಲಾಜೆ ಅವರಿಂದ ಉಚಿತ ದಿನಸಿ ವಿತರಣೆ

ಬೆಂಗಳೂರು, ಏ.19, ಹೆಬ್ಬಾಳ  ವಿಧಾನಸಭಾ ಕ್ಷೇತ್ರದ ಚೋಳ ನಾಯಕನ ಹಳ್ಳಿಯಲ್ಲಿ ಸಂಸದೆ  ಶೋಭಾ ಕರಂದ್ಲಾಜೆ, ವಿಧಾನ  ಪರಿಷತ್ ಸದಸ್ಯ ಡಾ ವೈ. ಎ. ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ ಕೊರೊನಾ ಕಾರಣದಿಂದ ಸಂಕಷ್ಟ ಕ್ಕೆ ಸಿಲುಕಿರುವ ಬಡವರು, ಕಟ್ಟಡ ಕಾರ್ಮಿಕರು, ಕೊಳಗೇರಿ ನಿವಾಸಿಗಳು, ಪೌರ ಕಾರ್ಮಿಕರಿಗೆ ಇಂದು ಉಚಿತ  ದಿನಸಿ ವಿತರಿಸಲಾಯಿತು.
ಶೋಭಾ  ಕರಂದ್ಲಾಜೆ ಮಾತನಾಡಿ, ಈಗಾಗಲೇ ಈ ಭಾಗದಲ್ಲಿ ಅಡುಗೆ ಮನೆ ನಿರ್ಮಿಸಿ ಪ್ರತಿದಿನ ಆಹಾರ  ವಿತರಿಸಲಾಗುತ್ತಿದೆ. ಸುಮಾರು ಒಂದು ಸಾವಿರ ಮಂದಿಗೆ ದಿನಸಿ ವಿತರಿಸಲಾಯಿತು. ಲಾಕ್‌ ಡೌನ್‌ ಆದಾಗಿನಿಂದ ಹಲವಾರು ಜನ  ರಾಜಕಾರಣಿಗಳು ದಿನಸಿ ವಿತರಿಸುತ್ತಿದ್ದಾರೆ. ಹೆಬ್ಬಾಳದಲ್ಲಿ  ನಾರಾಯಣ ಸ್ವಾಮಿ ಕೂಡಾ ಬಡಜನರಿಗೆ ದಿನಸಿ ವಿತರಿಸುತ್ತಿದ್ದಾರೆ ಎಂದರು.ಪಡಿತರ ಚೀಟಿ  ಇಲ್ಲದವರೂ ಬಹಳ ಜನ ಇದ್ದಾರೆ. ಅವರೆಲ್ಲರಿಗೂ ಇದರಿಂದ ಅನುಕೂಲ ಆಗುತ್ತಿದೆ. ದಿನಸಿ  ಮಾತ್ರವಲ್ಲದೇ ಪ್ರತಿದಿನ ಆಹಾರ ವಿತರಣೆ ಕೂಡಾ ಮಾಡಲಾಗುತ್ತಿದೆ. ಕೊರೊನಾ ಆದಷ್ಟು ಬೇಗ  ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.ಡಾ. ವೈ ಎ ನಾರಾಯಣ ಸ್ವಾಮಿ  ಮಾತನಾಡಿ, ಲಾಕ್‌ ಡೌನ್  ಎಲ್ಲಿವರೆಗೂ ಮುಂದುವರೆಯುತ್ತದೆಯೋ , ಅಲ್ಲಿಯವರೆಗೂ ಅನ್ನ ದಾಸೋಹ  ನಡೆಸಲಾಗುವುದು. ಈ ಭಾಗದಲ್ಲಿ ಬೇರೆ ರಾಜ್ಯಗಳ ಬಹುತೇಕ ಜನ ಸಿಲುಕಿ  ಹಾಕಿಕೊಂಡಿದ್ದಾರೆ. ಅಂತಹವರಿಗೆ ಆಹಾರಕ್ಕೆ ಬಹಳ ತೊಂದರೆ ಆಗುತ್ತಿದೆ. ಪಡಿತರ ಇಲ್ಲದವರಿಗೂ  ನಾವು ದಿನಸಿ ವಿತರಣೆ ಮಾಡುತ್ತಿದ್ದೇವೆ ಎಂದರು.