ಬೆಂಗಳೂರು, ಮೇ 3, ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿವಿಧ ವಲಯಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಲಾಕ್ ಡೌನ್‌ನಿಂದಾಗಿ ಬೆಂಗಳೂರು ನಗರದಲ್ಲಿ ಸುಮಾರು 40 ದಿನಗಳ ಕಾಲ ಕಾರ್ಮಿಕರು ಉಳಿದುಕೊಂಡಿದ್ದರು. ಅವರು ಬಹಳಷ್ಟು ಕಾತುರದಿಂದ ಊರಿಗೆ ತೆರಳಲು ಸಿದ್ಧರಾಗಿದ್ದರು. ಇದನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅವರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾಡಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ಕಾರ್ಮಿಕರ ಸುರಕ್ಷತೆ ನಮಗೆ ಪ್ರಮುಖ ಆದ್ಯತೆಯಾಗಿದೆ. ಹಾಗೆಯೇ, ಪ್ರಯಾಣಿಸುವವರು ನೈರ್ಮಲ್ಯದ ಕ್ರಮಗಳನ್ನು ಅನುಸರಿಸಿ, ಸ್ವಗ್ರಾಮಗಳಿಗೆ ತೆರಳಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಿ ಎಂದು ನನ್ನ ಕಳಕಳಿಯ ಮನವಿ ಎಂದು ತಿಳಿಸಿದ್ದಾರೆ. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕೂಡ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾರ್ಮಿಕರಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುತುವರ್ಜಿ ವಹಿಸಿ ಕಾರ್ಮಿಕರು ಅವರು ಊರಿಗೆ ತೆರಳಲು ಉಚಿತ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಡೀಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಟ್ವಿಟ್ ಮಾಡಿ, ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲಿರುವ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಯಿಂದ ಮೂರು ದಿನಗಳಿಗೆ ಉಚಿತ ಪ್ರಯಾಣ ಕಲ್ಪಿಸಲು ನಿರ್ಧರಿಸಲಾಗಿದೆ. ಯಾರು ಕೂಡ ಟಿಕೆಟ್ ಪಡೆಯಬಾರದು. ಮಾರ್ಗ ಮಧ್ಯದಲ್ಲಿ ಇಳಿಯಬಾರದು. ತಮ್ಮ ಸ್ವಗ್ರಾಮಗಳಿಗೆ ತೆರಳಿದ ನಂತರ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ.