ಬಳ್ಳಾರಿ, 16: ಪ್ರತಿಯೊಬ್ಬ ಯುವಕರಲ್ಲಿಯೂ ವೈವಿಧ್ಯಮವಾದ ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಯನ್ನು ಹೊರಹಾಕಲು ಅವರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿದಾಗ ಅವರಲ್ಲಿ ಕಲಾವಿದ, ಸಂಗೀತಗಾರ, ಚಿತ್ರಕಲಾವಿದ, ನಾಟಕಕಾರ ಹೊರಬರುತ್ತಾನೆ. ಪರಿಣಾಮ ಸುಪ್ತ ಪ್ರತಿಭೆ ಹೊರಹಾಕಿದಂತಾಗುತ್ತದೆ ಎಂದು ಸರಳಾದೇವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಕೆ.ಬಸಪ್ಪ ಅವರು ತಿಳಿಸಿದರು.
ಅವರು ಬುಧವಾರದಂದು ಸಂಜೆ ಸ್ಥಳೀಯ ಕೌಲ್ಬಜಾರ್ ಪ್ರದೇಶದಲ್ಲಿರುವ ಬಂಡಿಹಟ್ಟಿಯ ರಾಮಲಮ್ಮ ದೇವಸ್ಥಾನದ ಹತ್ತಿರ ಬಳ್ಳಾರಿಯ ನೆಹರು ಯುವ ಕೇಂದ್ರ ಹಾಗೂ ಇಬ್ರಾಹಿಂಪುರ ಗ್ರಾಮದ ಚಿಗುರು ಕಲಾ ತಂಡ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಸಾಂಸ್ಕೃತಿಕ ಉತ್ಸವ -2020ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಅನೇಕ ಪ್ರತಿಭೆಗಳು ಇರುತ್ತವೆ. ಅವರಿಗೆ ಅವಕಾಶದ ಕೊರತೆ ಇರುತ್ತದೆ. ಕೇಂದ್ರ ಮತ್ತು ರಾಜ್ಯ ಸಕರ್ಾರದ ಇಲಾಖೆಗಳು ಗ್ರಾಮೀಣ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಕಲಾಪ್ರದರ್ಶನಕ್ಕೆ ಅವಕಾಶ ನೀಡಬೇಕು. ಅಂತಹ ಕಾರ್ಯವನ್ನು ಇದೀಗ ಭಾರತ ಸಕರ್ಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಮಾಡಿ ಜನರಲ್ಲಿ ಸಾಂಸ್ಕೃತಿಕ ಮನೋಭಾವನೆ ಹೆಚ್ಚಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಯಲಾಟದ ಮಾಸ್ತರರು ಹಾಗೂ ಕಲಾವಿದರಾದ ಸಣ್ಣಭೀಮಣ್ಣ ಅವರು ಮಾತನಾಡಿ ಎಲ್ಲರೂ ಕಲೆಯನ್ನು ಗೌರವಿಸಬೇಕು. ಕಲೆಗೆ ಪ್ರೋತ್ಸಾಹ, ಸಹಕಾರ ನೀಡಿದಾಗ ಮಾತ್ರ ಕಲೆಯು ಬೆಳವಣಿಗೆ ಹೊಂದುತ್ತದೆ. ಯುವಕರು ಬೇರೆ ಬೇರೆ ದುಶ್ಚಟಗಳಿಗೆ ಬಲಿಯಾಗದೆ ಸಂಗೀತ, ಸಾಹಿತ್ಯ, ಕಲಾಭ್ಯಾಸದಲ್ಲಿ ತೊಡಗಿದಾಗ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನೆಹರು ಯುವ ಕೇಂದ್ರದ ಸಿಬ್ಬಂದಿ ಅಂಬರೀಷ್, ಜಾನಪದ ಕಲಾವಿದ ಅನುಮಯ್ಯ, ಸಮಾಜಸೇವಕ ಕೆ.ಶಿವಶರಣ, ಕಲಾವಿದರಾದ ಚಿದಾನಂದ, ದೊಡ್ಡ ಈಶ್ವರ, ಶೇಖಣ್ಣ, ಎರ್ರಿಸ್ವಾಮಿ ಗವಾಯಿ, ಕೋರಿ ಹನುಮಂತಪ್ಪ, ಪರಮೇಶಪ್ಪ, ಹಾಜರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅನುಮಯ್ಯ ತಂಡದವರು ಪ್ರಾರ್ಥನೆ ಗೀತೆ ಹಾಡಿದರು. ಪ್ರಾಸ್ತಾವಿಕವಾಗಿ ಚಿಗುರು ಕಲಾತಂಡದ ಅಧ್ಯಕ್ಷ ಹುಲುಗಪ್ಪ ಅವರು ಮಾತನಾಡಿದರು. ಗೋಡ್ಲಪ್ಪ ಸ್ವಾಗತಿಸಿ, ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಸಂಡೂರು ತಾಲ್ಲೂಕಿನ ದರೋಜಿ ಗ್ರಾಮದ ಶ್ರೀ ಮಾರುತಿ ಭಜನಾ ಮಂಡಳಿ, ಬಂಡಿಹಟ್ಟಿಯ ರಾಮಲಾದೇವಿ ಭಜನಾ ಮಂಡಳಿ, ತಿಮ್ಮಲಾಪುರದ ಅನುಮಯ್ಯ ತಂಡದಿಂದ ಜಾನಪದ ಸಂಗೀತ ಗಾಯನ, ಕೆ.ಶ್ರೀಗುರು ಅವರು ಚಲನಚಿತ್ರ ಗೀತೆಗಳನ್ನು ಹಾಗೂ ಭಾವಗೀತೆಗಳನ್ನು ಗಾಯನ ಮಾಡಿದರು. ನಂತರ ಮೈನಾ ಮತ್ತು ತಂಡದವರು ಜಾನಪದ ನೃತ್ಯ ಮಾಡಿದರು.