ಲೋಕದರ್ಶನ ವರದಿ
ಜಾನಪದವು ಹಳ್ಳಿಯ ಬದುಕಿನ ಅನಾವರಣವಾಗಿದೆ: ಡಾ. ಪೋತರಾಜ
ಮೂಡಲಗಿ 03: ಬದಲಾದ ಇಂದಿನ ಕಾಲಘಟ್ಟದಲ್ಲಿ ನಾನಾ ಕಾರಣಗಳಿಂದ ನಮ್ಮ ಉಡುಗೆ, ತೊಡುಗೆ, ಸಂಪ್ರದಾಯ, ಆಚರಣೆ, ವಿವಿಧ ಕಲೆಗಳು ಅವನತಿಯತ್ತ ಸಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಜಾನಪದ ಉತ್ಸವದಂತ ಅಗತ್ಯತೆ ಇಂದು ತುಂಬಾ ಅಗತ್ಯವಿದೆ. ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯ ಇಲಾಖೆಯಿಂದ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಡಾ. ಮಹಾದೇವ ಪೋತರಾಜ ಕನ್ನಡ ಉಪನ್ಯಾಸಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ರಬಕವಿ-ಬನಹಟ್ಟಿ ಇವರು ತಿಳಿಸಿದರು.
ಸ್ಥಳೀಯ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಉತ್ಸವ-2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಹಳ್ಳಿಯ ಬದುಕು ಬಂಗಾರದ ಬದುಕು. ಇಂದು ನಾವು ಆಧುನಿಕ ಸಂಸ್ಕೃತಿಗೆ ಒಗ್ಗಿಕೊಂಡು ನಿಜವಾದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮುಂದಿನ ಜನಾಂಗಕ್ಕೆ ಜನವಾಣಿಯಾಗಿರುವ ಈ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯ ಹಮ್ಮಿಕೊಂಡ ಈ ಜಾನಪದ ಉತ್ಸವ ಕಾರ್ಯಕ್ರಮವನ್ನು ಇಲಾಖೆ ಆದೇಶ ಮಾಡುವ ಪೂರ್ವದಲ್ಲಿಯೇ ನಮ್ಮ ಮೂಡಲಗಿ ಕಾಲೇಜು ಕಳೆದ ಎಂಟು ವರ್ಷಗಳಿಂದ ನಡೆಸುತ್ತಾ ಬಂದಿದ್ದು ನಾಡಿನಾದ್ಯಂತ ಹಬ್ಬಿಸಿದ ಕೀರ್ತಿ ಸಲ್ಲುತ್ತದೆ. ಪ್ರತಿವರ್ಷವೂ ಈ ಕಾರ್ಯಕ್ರಮವು ಇನ್ನೂ ವಿಜೃಂಭಣೆಯಿಂದ ಜರುಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಮಹೋದಯರನ್ನು ಜಾನಪದ ಕಲಾವಿದರ ತಂಡದೊಂದಿಗೆ ಡೊಳ್ಳು ಬಾರಿಸುವುದರ ಮೂಲಕ ವೇದಿಕೆಗೆ ಕರೆ ತರಲಾಯಿತು. ವೇದಿಕೆ ಮೇಲಿನ ಗಣ್ಯರು ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಭಾರಿ ಪ್ರಾಂಶುಪಾಲ ಬಿ.ಎಸ್.ಕೆಸರಗೊಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರ ಸಹಕಾರದಿಂದ ಮಹಾವಿದ್ಯಾಲಯ ಮಾಡೋಣ ಇದಕ್ಕೆ ಎಲ್ಲರೂ ಕೈ ಜೋಡಿಸಿ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸೋಣ ಎಂದು ಹೇಳಿದರು.
ನಮ್ಮ ನಾಡಿನ ಹೆಮ್ಮೆಯ ಜಾನಪದ ಕಲಾವಿದ ನಾಗೇಂದ್ರ ಮಾನೆ ಹಾಗೂ ತಂಡದವರು ಗೊಂದಲಿಗರ ಹಾಡನ್ನು ಅದ್ಭುತವಾಗಿ ಹಾಡಿ ಮನರಂಜಿಸಿದರು. ಸ್ಥಳೀಯ ಮೂಡಲಗಿಯ ಜಾನಪದ ಕಲಾವಿದ ಚುಟುಕುಸಾಬ ಜಾತಗಾರ ಅವರು ಸಿದ್ಧಿ ಸೋಗು ಕಲೆಯನ್ನು ಪ್ರದರ್ಶಿಸಿದರು. ಅವರಿಗೆ ಇತ್ತೀಚೆಗೆ ಏಷಿಯಾ ಇಂಟರ್ ನ್ಯಾಶನಲ್ ಕಲ್ಚರಲ್ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್ ಪದವಿ ನೀಡಿದ ಪ್ರಯುಕ್ತ ಮಹಾವಿದ್ಯಾಲಯದಿಂದ ಸನ್ಮಾನಿಸಲಾಯಿತು.
ಮಹಾವಿದ್ಯಾಲಯಕ್ಕೆ ಇಂದು ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಹಳ್ಳಿಯ ದೇಸಿ ಉಡುಪುಗಳನ್ನು ಧರಿಸಿ ಆಗಮಿಸಿದ್ದರು. ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಬಗೆಬಗೆಯ ಭಕ್ಷ್ಯ ಭೋಜನ ಸವಿದು ಎಲ್ಲರೂ ಸಂತೃಪ್ತರಾದರು.
ಸಾಂಸ್ಕೃತಿಕ ವಿಭಾಗದ ಸಂಯೋಜಕ ಶಿವಾನಂದ ಚಂಡಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಡಿ.ಸಿ ಸದಸ್ಯರಾದ ಚಂದ್ರು ಗಾಣಿಗ, ಸಂಜೀವ ಮೊಕಾಶಿ, ಉಪನ್ಯಾಸಕರಾದ ಶಿವಕುಮಾರ, ಬಿ.ಸಿ. ಹೆಬ್ಬಾಳ, ಸುಮಿತ್ರಾ ಮಾಸ್ತಿ, ರಾಧಾ ಎಂ.ಎನ್, ಗಾಯತ್ರಿ ಸಾಳೋಖೆ, ಹನುಮಂತ ಕಾಂಬಳೆ, ಬಿ.ಎಸ್.ನಾಯಿಕ, ಎ.ಜಿ.ಗಿರೆನ್ನವರ, ಎನ್.ಬಿ.ಸಂಗ್ರೇಜಿಕೊಪ್ಪ, ಸಂಜೀವಕುಮಾರ ಗಾಣಿಗೇರ, ಶ್ರದ್ಧಾ ಬೇವಿನಕಟ್ಟಿ, ಡಾ.ಹಾಲಪ್ಪ ಮಡಿವಾಳರ, ಸಂಜೀವ ಮದರಖಂಡಿ ಮುಂತಾದವರು ಭಾಗವಹಿಸಿದ್ದರು.
ಸುಷ್ಮಿತಾ ಟಗರೆ ಹಾಗೂ ಲಕ್ಷ್ಮಿ ತೋಟಗಿ ಸ್ವಾಗತಿಸಿದರು. ಮಾಲಾಶ್ರೀ ಮುಗುಳಖೋಡ ಅತಿಥಿಗಳನ್ನು ಪರಿಚಯಿಸಿದರು. ಅಭಿಷೇಕ ಕಕಮರಿ ಹಾಗೂ ಶೃತಿ ಮಾಲಗಾರ ನಿರೂಪಿಸಿದರು. ರೂಪಾ ಕಂಕಣವಾಡಿ ವಂದಿಸಿದರು.