ಅಭಿಮಾನ ಯಾತ್ರೆ ಯಶಸ್ವಿಗೆ ಸಹಕರಿಸಿ: ಬಸನಗೌಡ

Contribute to the success of the Abhimana Yatra: Basana Gowda

ಅಭಿಮಾನ ಯಾತ್ರೆ ಯಶಸ್ವಿಗೆ ಸಹಕರಿಸಿ: ಬಸನಗೌಡ  

ತಾಳಿಕೋಟಿ: ಶಾಸಕ ಬಸನಗೌಡ ಯತ್ನಾಳರ ಉಚ್ಚಾಟನೆ ವಿರೋಧಿಸಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕೆಲವರು ದುರುದ್ದೇಶದಿಂದ ಮಾಜಿ ಶಾಸಕ ನಡಹಳ್ಳಿ ಅವರ ವ್ಯಕ್ತಿತ್ವ ತೇಜೋವಧೆಗೆ ಇಳಿದಿದ್ದು ಇದನ್ನು ನಡಹಳ್ಳಿ ಅಭಿಮಾನಿ ಬಳಗ ಉಗ್ರವಾಗಿ ಖಂಡಿಸುತ್ತದೆ, ಇದರ ವಿರುದ್ಧ ಎಪ್ರಿಲ್ 7 ರಂದು ಪಟ್ಟಣದಲ್ಲಿ ನಡಹಳ್ಳಿ ಅಭಿಮಾನಿ ಬಳಗದ ವತಿಯಿಂದ ಅಭಿಮಾನ ಯಾತ್ರೆ ನಡೆಯಲಿದೆ. ಇದರ ಯಶಸ್ವಿಗೆ ಸರ್ವ ಸಮಾಜದ ಬಾಂಧವರು ಸಹಕರಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಬಸನಗೌಡ ವಣಕಿಹಾಳ ಮನವಿ ಮಾಡಿಕೊಂಡರು.  

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ನಡಹಳ್ಳಿ ಅವರು ಸರ್ವ ಸಮಾಜವನ್ನು ಪ್ರೀತಿಸುವ ಗೌರವಿಸುವ ವ್ಯಕ್ತಿಗಳಾಗಿದ್ದಾರೆ ಅವರೆಂದೂ ಜಾತಿ ರಾಜಕಾರಣ ಮಾಡಿದವರಲ್ಲ, ಜನರ ಸೇವೆಯ ಮುಖಾಂತರ ರಾಜಕೀಯಕ್ಕೆ ಬಂದವರು ಆದರೆ ಅವರಿಗೆ ಆಗದ ಕೆಲವರು ಉದ್ದೇಶಪೂರ್ವಕವಾಗಿ ಅವರ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಅವರ ತೇಜೋವಧೆಗೆ ಕೀಳು ಮಟ್ಟದ ಕೆಲಸಗಳಿಗೆ ಇಳಿದಿದ್ದಾರೆ, ಹತ್ತು ವರ್ಷಗಳ ಹಿಂದಿನ ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೀಗೆ ಮಾಡುವುದರಿಂದ ನಡಹಳ್ಳಿ ಅವರ ವ್ಯಕ್ತಿತ್ವ ಹಾಳಾಗುತ್ತದೆ ಎಂದು ತಿಳಿದಿದ್ದರೆ ಅದು ಅವರ ಭ್ರಮೆಯಾಗಿದೆ. ನಡಹಳ್ಳಿ ಜನರ ಹೃದಯಗಳಲ್ಲಿ ಇರುವ ವ್ಯಕ್ತಿ ಅವರು ಸೋತಿರಬಹುದು ಅದು ಮತದಾರರ ತೀರ್ಮಾನ ಆದರೆ ಜನ ಅವರ ಸೇವೆಯನ್ನು ಎಂದೂ ಮರೆಯುವುದಿಲ್ಲ, ರೆಡ್ಡಿ ಹಾಗೂ ಪಂಚಮಸಾಲಿ ಸಮಾಜದ ನಡುವೆ ಅನೂನ್ಯವಾದ ಸಂಬಂಧಗಳಿವೆ ನಾವೆಲ್ಲಿದ್ದರೂ ಒಬ್ಬರಿಗೊಬ್ಬರು ರಾಜಕೀಯದಲ್ಲಿ ಬೆಂಬಲಿಸುತ್ತಾ ಬಂದಿದ್ದೇವೆ ನಮ್ಮನ್ನು ಬೇರಿ​‍್ಡಸಲು ಯಾರಿಂದಲೂ ಸಾಧ್ಯವಿಲ್ಲ, ನಡಹಳ್ಳಿ ಅವರು ಯತ್ನಾಳರ ಕುರಿತು ಮಾತನಾಡಿದ್ದು ರಾಜಕೀಯವಾಗಿ ಅಷ್ಟೇ ಇದನ್ನು ಜಾತೀಕರಣಗೊಳಿಸುವ ಅಗತ್ಯ ಇಲ್ಲ. ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಹೇಳಿಕೆಗಳು ಸಾಮಾನ್ಯ ಆದರೆ ಅವು ವೈಯಕ್ತಿಕ ತೇಜೋವಧೆ ಮಟ್ಟಿಗೆ ಹೋಗಬಾರದು ಎಂಬುದು ನಮ್ಮ ಕಳಕಳಿಯಾಗಿದೆ. ನಡಹಳ್ಳಿ ಅವರಿಗೆ ರಾಜಕಾರಣಕ್ಕಿಂತಲೂ ಹೆಚ್ಚು ಎಲ್ಲ ಸಮಾಜ ಜನರ ಪ್ರೀತಿ ವಿಶ್ವಾಸ ಮುಖ್ಯವಾಗಿದೆ ಅದನ್ನು ಅವರೆಂದೂ ಕಳೆದುಕೊಳ್ಳಲು ಬಯಸುವುದಿಲ್ಲ ಎಂದ ಅವರು ಏಪ್ರಿಲ್ 7ರಂದು ಪಟ್ಟಣದಲ್ಲಿ ನಡೆಯಲಿರುವ ಎ. ಎಸ್‌. ಪಾಟೀಲ ನಡಹಳ್ಳಿ ಅಭಿಮಾನ ಯಾತ್ರೆಯಲ್ಲಿ ಸರ್ವ ಸಮಾಜದವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಬೇಕೆಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ ಎಂದರು.  

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲನಗೌಡ ಪೊಲೀಸ ಪಾಟೀಲ, ರಾಜುಗೌಡ ಕೋಳೂರ( ಮಾಜಿ ಟಿಪಿ), ಮಲ್ಲಯ್ಯ ಸಾಲಿಮಠ, ಗುಂಡಕನಾಳ ರಾಜುಗೌಡ,ವಿಶ್ವನಾಥರೆಡ್ಡಿ ಪಾಟೀಲ,ಶಂಕರಗೌಡ ದೇಸಾಯಿ,ಜಿಪಂ ಮಾಜಿ ಸದಸ್ಯ ಸಾಹೇಬಗೌಡ ಪಾಟೀಲ, ಸಿದ್ದನಗೌಡ ಲಕ್ಕುಂಡಿ, ಮುತ್ತು ಜಹಗೀರದಾರ, ಸುರೇಶಕುಮಾರ ಇಂಗಳಗಿ, ಗೌಡಪ್ಪಗೌಡ ಮಾಳಿ, ಬಸನಗೌಡ ನೀರಲಗಿ, ಸಾಹೇಬಗೌಡ ನಡಹಳ್ಳಿ, ಮಂಜು ಮೈಲೇಶ್ವರ ಇದ್ದರು.