ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟದಲ್ಲಿದ್ದ ವಕೀಲರಿಗೆ ಹಣಕಾಸಿನ ನೆರವು

ಬೆಂಗಳೂರು, ಏ.23, ಕೋವಿಡ್ -19 ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ 368 ಅರ್ಹ  ಯುವ ವಕೀಲರಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 18,40,000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಬೆಂಗಳೂರು ವಕೀಲರ ಸಂಘದಿಂದ ವರ್ಗಾಯಿಸಲಾಗಿದೆ ಎಂದು ಸಂಘದ ಅಧ್ಯಕಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಏಪ್ರಿಲ್ 6, 2020ರಂದು ಸಂಘದ ವತಿಯಿಂದ ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅರ್ಹ ಯುವ ವಕೀಲರಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ಹಿರಿಯ ವಕೀಲರಾದ ಡಿ.ಎಲ್.ಎನ್. ರಾವ್ ಅವರ ನೇತೃತ್ವದಲ್ಲಿ ಎನ್‌.ಎಸ್‌. ಸತ್ಯನಾರಾಯಣ ಗುಪ್ತ, ಎ.ಎಸ್. ಪೊನ್ನಪ್ಪ, ಹಾಗೂ ಕೆ.ದಿವಾಕರ್  ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.  ಅದರಂತೆ ಅರ್ಹ ಯುವ ವಕೀಲರಿಂದ ಅರ್ಜಿಗಳನ್ನು  ಆಹ್ವಾನಿಸಲಾಯಿತು ಎಂದು ತಿಳಿಸಿದ್ದಾರೆ.
ಏಪ್ರಿಲ್ 16ರಂದು ಈ ಸಮಿತಿಯು ಸಭೆ ಸೇರಿ ಕೋವಿಡ್- 19 ಹಣಕಾಸಿನ ನೆರವಿಗೆ ಸಲ್ಲಿಸಿದ್ದ ಅರ್ಜಿಗಳನ್ನು 156 ಅರ್ಹ ಯುವ ವಕೀಲರ ಅರ್ಜಿಗಳನ್ನು ಪುರಸ್ಕರಿಸಿದ್ದು, ಮೊದಲ ಹಂತದಲ್ಲಿ ಈ 156 ಯುವ ವಕೀಲರಿಗೆ 5000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ನಂತರ ಕೋವಿಡ್ 19 ಹಣಕಾಸಿನ ನೆರವಿಗಾಗಿ ಏಪ್ರಿಲ್ 6ರ ಪ್ರಕಟಣೆಯಂತೆ ಹಣಕಾಸಿನ ನೆರವಿಗಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಏಪ್ರಿಲ್ 19ರವರೆಗೆ ವಿಸ್ತರಿಸಲಾಯಿತು. ಈ ದಿನಾಂಕದವರೆಗೆ ಸ್ವೀಕರಿಸಿದ ಅರ್ಜಿಗಳನ್ನು ಸಮಿತಿಯು ಪರಿಶೀಲಿಸಿ  212 ಅರ್ಹ ಯುವ ವಕೀಲರಿಗೆ 5000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಏಪ್ರಿಲ್ 22ರಂದು ಹಣ ವರ್ಗಾಯಿಸಲಾಗಿದೆ.
ವಕೀಲರ ಸಂಘವು ಇಂದಿನ ಸಂಕಷ್ಟದ ಕಾಲದಲ್ಲಿ ಸಂಘದ ಹಿರಿಯ ಹಾಗೂಇತರ ವಕೀಲರಿಂದ 19,14,501 ರೂ.ಗಳನ್ನು ಹಣಕಾಸಿನ ದೇಣಿಗೆ ಸಂಗ್ರಹಿಸಿ, ಸಂಕಷ್ಟದಲ್ಲಿದ್ದ ಒಟ್ಟು 368 ಅರ್ಹ  ಯುವ ವಕೀಲರಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 18,40,000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಂಘದ ಅರ್ಹ ಯುವ ವಕೀಲರಿಗೆ ಕೋವಿಡ್ -19 ಹಣಕಾಸು ನೆರವಿಗೆ ಉದಾರವಾಗಿ ಹಣಕಾಸಿನ ದೇಣಿಗೆ ನೀಡಿದ ಎಲ್ಲಾ ವಕೀಲರಿಗೆ ಸಂಘವು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.
ಹಿರಿಯ ವಕೀಲರಾದ ಡಿಎಲ್‌ಎನ್‌ ರಾವ್ ಅವರ ನೇತೃತ್ವದಲ್ಲಿ ವಕೀಲರಾದ ಎನ್.ಎಸ್. ಸತ್ಯನಾರಾಯಣಗುಪ್ತ, ಎ.ಎಸ್.ಪೊನ್ನಪ್ಪ, ಕೆ.ದಿವಾಕರ್‌ ಅವರನ್ನು ಒಳಗೊಂಡ ಸಮಿತಿಯು ತಮ್ಮ ಅಮೂಲ್ಯವಾದ ಸಮಯ ಹಾಗೂ ಸಲಹೆಗಳೊಂದಿಗೆ ಈ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಬೆಂಗಳೂರು ವಕೀಲರ ಸಂಘವು ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.