ಶೀಘ್ರದಲ್ಲೇ ಶಾಲೆಗಳಿಗೆ ಶುಲ್ಕ ಹೆಚ್ಚಳ ಮಾಡದಂತೆ ಕಟ್ಟಾಜ್ಞೆ ವಿಧಿಸುವ ಸುತ್ತೋಲೆ ಜಾರಿ; ಸುರೇಶ್ ಕುಮಾರ್

ಬೆಂಗಳೂರು, ಏ 29,ಕೋವಿಡ್-19 ಸಂಕಷ್ಟ ಹಾಗೂ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಕಟ್ಟಾಜ್ಞೆ ವಿಧಿಸುವ ಸುತ್ತೋಲೆಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರ ಹೊರಡಿಸಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೋವಿಡ್ -19 ಕುರಿತ ನಿತ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯವಾಗುವಂತೆ ಈ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು. ಈ ಹಿಂದೆ ಕೂಡ ಶಾಲೆಗಳು ಶುಲ್ಕ ಸ್ವೀಕರಿಸಬಾರದು ಎಂಬ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ, ಪೋಷಕರು ಸ್ವಯಂ ಪ್ರೇರಿತರಾಗಿ ಶುಲ್ಕ ಪಾವತಿಸಲು ಮುಂದಾದಲ್ಲಿ ಅದನ್ನು ಆನ್ ಲೈನ್ ಮೂಲಕ ಪಾವತಿಸಿಕೊಳ್ಳಬಹುದು. ನಂತರ ಅದನ್ನು ಶಿಕ್ಷಕರ ವೇತನ ಪಾವತಿಗೆ ಬಳಸಿಕೊಳ್ಳಬಹುದು ಎಂದು ಸೂಚನೆ ನೀಡಲಾಗಿತ್ತು.ಆದರೆ, ಒಂದೆರಡು ಶಾಲೆಗಳ ಆಡಳಿತ ಮಂಡಳಿಗಳು ಈ ವಿನಾಯ್ತಿಯನ್ನು ದುರುಪಯೋಗಪಡಿಸಿಕೊಂಡು ಪೋಷಕರ ಮೇಲೆ ಶುಲ್ಕ ಪಾವತಿಗೆ ಒತ್ತಡ ಹೇರುತ್ತಿರುವ ಕುರಿತು ದೂರುಗಳು ಬಂದಿವೆ. ಅಂತಹ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.