ಸ್ಮಶಾನದಲ್ಲಿ ಊಟ, ಮದುವೆ ಮಾಡುವುದರಿಂದ ಮೌಡ್ಯತೆ ನಿವಾರಿಸಬಹುದು: ರವೀಂದ್ರಗೌಡ ಎಫ್‌. ಪಾಟೀಲ

ರಾಣೇಬೆನ್ನೂರು 21: ಸ್ಮಶಾನದಲ್ಲಿ ಮದುವೆ ಮಾಡುವುದರಿಂದ, ಸ್ಮಶಾನದಲ್ಲಿ ಊಟ ಮಾಡುವುದರಿಂದ ಅತ್ಯಂತ ಪರಿಣಾಮಕಾರಿಯಾಗಿ ಮೂಡ ನಂಬಿಕೆಯನ್ನು ಸಮಾಜದಲ್ಲಿ ತೊಲಗಿಸಬಹುದಾಗಿದೆ ಎಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು. 

ಅವರು ಇಂದು ಮುಷ್ಟೂರು ಗ್ರಾಮದ ಸ್ಮಶಾನ (ರುದ್ರಭೂಮಿ) ದಲ್ಲಿ ಮೃತಪಟ್ಟಿದ್ದ ಅವರ ಸಹೋದರ ಸಂಬಂಧಿ ದಿಽಽ ಲಕ್ಷ್ಮಪ್ಪ ಸಣ್ಣಹನುಮಪ್ಪ ಮುಷ್ಟೂರುನಾಯಕ ರವರ ಅಂತ್ಯಸಂಸ್ಕಾರ ಮಾಡುವ ಸಂದರ್ಭದಲ್ಲಿ ಮೃತದೇಹ ‘ದಹನ’ ಸಂದರ್ಭದಲ್ಲಿ ಸಂಬಂಧಿಕರು, ಕುಟುಂಬಸ್ತರು, ಗ್ರಾಮಸ್ಥರೊಂದಿಗೆ ಊಟ ಮಾಡುವ ಅಪರೂಪದಲ್ಲಿಯೆ ಅಪರೂಪವಾದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾನ್ಯ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಮೌಡ್ಯತೆ ನಿರ್ಮೂಲನೆಗೆ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳಲ್ಲಿ ಸ್ಮಶಾನದಲ್ಲಿ ಊಟ ಮಾಡುವುದು ಕೂಡ ಒಂದಾಗಿದೆ ಆದರೆ ನಾವು ಮೃತಪಟ್ಟ ವ್ಯಕ್ತಿಯ ದೇಹವನ್ನು ದಹನ ಮಾಡುವ ಸಂದರ್ಭದಲ್ಲಿಯೆ ದುಃಖದಲ್ಲಿರುವ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಊಟ ಮಾಡಿಸಿ ದುಃಖ ದೂರ ಮಾಡಿಸಿ ಸ್ಮಶಾನದ ಬಗ್ಗೆ ಇರುವ ದಂತಕಥೆಗಳು ಮೂಡ ನಂಬಿಕೆಗಳಿಗೆ ತಿಲಾಂಜಲಿ ಇಟ್ಟು ಜನಜಾಗೃತಿ ಮೂಡಿಸುತ್ತಾ ಮತ್ತೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ ಎಂದರು.  

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಅನ್ನ ಸಾಂಬಾರ ಮಾಡಲಾಗಿತ್ತು. ಮೃತರ ಸಂಬಂಧಿಕರು, ಹಿತೈಶಿಗಳು, ಬುದ್ದಿಜೀವಿಗಳು, ಪ್ರಜ್ಞಾವಂತರು, ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದು ವಿಶೇಷವಾಗಿತ್ತು.