ಉತ್ತರ ಕರ್ನಾಟಕದ ಏಕೈಕ ಅಂಬಾರಿ ಉತ್ಸವ ಸುರಗಿರಿಯ ಉತ್ಸವ

ಮಹಾಲಿಂಗಪುರ 12: ಮೈಸೂರಿನಂತೆ ಅಂಬಾರಿ ಉತ್ಸವ ನಡೆಯುವ ಉತ್ತರ ಕರ್ನಾಟಕದ ಏಕೈಕ ಅಂಬಾರಿ ಉತ್ಸವ ಕುಂದರಗಿಯ ಸುರಗಿರಿ ಭುವನೇಶ್ವರಿ ಅಮ್ಮನವರ ಅಂಬಾರಿ ಉತ್ಸವ. ಈ ಅಂಬಾರಿ ಉತ್ಸವದ ಒಂದು ದಿನದ ಸೇವೆ ಮಹಾಲಿಂಗಪುರದ ಭಕ್ತರಿಗೆ ಸಂದಿರುವುದು ಅಮ್ಮನವರ ಆಜ್ಞೆ ಎಂದು ಲಕ್ಷ್ಮಣ ಅಪ್ಪಾಜಿ ಹೇಳಿದರು.  

ಸ್ಥಳೀಯ ಬಸವನಗರದ ಸಮುದಾಯ ಭವನದಲ್ಲಿ ಅಂಬಾರಿ ಉತ್ಸವಕ್ಕೆ ಮಹಾಲಿಂಗಪುರದ ಭಕ್ತರಿಗೆ ಆಮಂತ್ರಣ ನೀಡಿ ಮಾತನಾಡಿದ ಅವರು, 16 ಸಾವಿರ ಭಕ್ತರು, 115 ಗ್ರಾಮಗಳು ಸರದಿಯಲ್ಲಿದ್ದರೂ 21 ವರ್ಷಗಳ ನಂತರ ಮಹಾಲಿಂಗಪುರದ ಮಹಿಳೆಯರಿಗೆ ಸೇವಾ ಭಾಗ್ಯ ದೊರೆತಿರುವುದು ಪುರದ ಪುಣ್ಯ. ಅಂದು ಸೇರುವ ಲಕ್ಷಾಂತರ ಭಕ್ತರಿಗೆ ಶಕ್ತ್ಯಾನುಸಾರ ಸೇವೆಗೈದು ಕೃತಾರ್ಥರಾಗಲು ತಿಳಿಸಿ ಸೇವಾ ದಿನವನ್ನು ಅಮ್ಮನವರ ಆಜ್ಞೆಯಂತೆ ನಂತರ ತಿಳಿಸುವುದಾಗಿ ಹೇಳಿದರು. 

ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಮತ್ತು ಬಸವನಗರದ ಗುರು ಹಿರಿಯರ ನೇತೃತ್ವದಲ್ಲಿ ಆಮಂತ್ರಣ ಸ್ವೀಕರಿಸಿ ಪೂಜ್ಯರನ್ನು ಸನ್ಮಾನಿಸಲಾಯಿತು. 

ಬಸವನಗರ ಮತ್ತು ಸುತ್ತಲಿನ ನೂರಾರು ಮಹಿಳೆಯರು ಅಂದು ಬಂದು ಸೇವಾ ಕಾರ್ಯ ಮಾಡುವುದಾಗಿ ಹೇಳಿದರು. 

ಮುಖಂಡರಾದ ಚನ್ನಬಸು ಹುರಕಡ್ಲಿ, ಶ್ರೀಶೈಲ ಬಾಡನವರ, ಶ್ರೀಶೈಲ ಉಳ್ಳಾಗಡ್ಡಿ, ಮಹಾದೇವ ಟಿರಿಕಿ, ಭೀಮಶೀ ಪೂಜಾರಿ, ಮಲಕಾಜಪ್ಪ ಹನಗಂಡಿ, ಸದಾಶಿವ ಮುನ್ನೊಳ್ಳಿ, ಕುಮಾರ ಮಾಂಗ, ಮಾಂತು ಪಾತ್ರೋಟ, ಬಸವರಾಜ ಗಿರಿಸಾಗರ ಇತರರಿದ್ದರು. 

ಕಾವ್ಯ ಮಾಳಿ ಪ್ರಾರ್ಥಿಸಿ, ಚನ್ನಬಸು ಹುರಕಡ್ಲಿ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.