ಲಾಕ್‌ಡೌನ್ ಸಡಿಲಿಕೆಯಲ್ಲಿ ಜಿಲ್ಲಾಡಳಿತ, ಸರಕಾರದ ಆತುರತೆ ಆತಂಕಕಾರಿ: ವೆಲ್ಫೇರ್ ಪಾರ್ಟಿ

ಮಂಗಳೂರು,  ಮೇ 6,ದ. ಕ. ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಸದ್ಯ  ಲಾಕ್‌ ಡೌನ್ ಸಡಿಲಿಕೆಯನ್ನು ಘೋಷಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇನ್ನೂ ಕೊರೋನ  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶಂಕಿತರಿರುವವರ ಕ್ವಾರ೦ಟಯಿನ್ ಅವಧಿ  ಜಿಲ್ಲೆಯ ಕೆಲವೆಡೆಗಳಲ್ಲಿ  ಇನ್ನಷ್ಟೇ ಮುಗಿಯಬೇಕಿದ್ದು ಜನರ ಆತಂಕ ಇನ್ನೂ ದೂರವಾಗುವ  ಮೊದಲೇ ಇದೊಂದು ತರಾತುರಿಯ ಕ್ರಮ  ವೆಲ್ಪೇರ್ ಪಾರ್ಟಿ ದಕ್ಷಿಣ  ಕನ್ನಡ  ಜಿಲ್ಲಾ ಅಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಕಳವಳ ವ್ಯಕ್ತಪಡಿಸಿದ್ದಾರೆ.ದ.  ಕ. ಜಿಲ್ಲೆಯು ಇನ್ನೂ ಆರೆಂಜ್  ಝೋನ್ ನಲ್ಲಿನ (ಅಲರ್ಟ್) ಎಚ್ಚರಿಕೆವಹಿಸ ಬೇಕಾದ  ವ್ಯಾಪ್ತಿಯಲ್ಲಿದೆ, ಎಂಬ ಅರಿವು ಸರ್ಕಾರ ಇದ್ದರೂ ಹಸಿರು ವಲಯದಲ್ಲಿ ಗುರುತಿಸುವ ಉಡುಪಿ  ಜಿಲ್ಲೆಯಲ್ಲಿ ಕೂಡ ಅಂಗಡಿ ಮುಗ್ಗಟ್ಟುಗಳು  ಮಧ್ಯಾಹ್ನವೇ ಮುಚ್ಚಬೇಕು ಎನ್ನುವ ಆದೇಶ   ಜಾರಿಯಲ್ಲಿದ್ದರೂ, ನಮ್ಮ ಮಂಗಳೂರು ಜಿಲ್ಲೆಗೆ ಇಂತಹ ಕಾನೂನು ತಾರತಮ್ಯ ಯಾಕಾಗಿ ಎಂದು  ಅವರು ಪ್ರಶ್ನಿಸಿದರು.
ಒಟ್ಟಿನಲ್ಲಿ  ಸರಕಾರ ಮತ್ತು ಜಿಲ್ಲಾಡಳಿತ ಮಧ್ಯೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿ  ಸಂಸದರ ಹೇಳಿಕೆ ಒಂದಾದರೆ, ಜಿಲ್ಲಾಧಿಕಾರಿ ಆದೇಶ ಇನ್ನೊಂದು ಮತ್ತು ರಾಜ್ಯ ಸರಕಾರದ  ಪ್ರಕಟಣೆ ಮಗದೊಂದು ಎಂಬಂತಿದೆ. ಸಂಸದ ನಳಿನ್ ಕುಮಾರ್ ರವರಂತೂ ಬೆಳಿಗ್ಗೆ ಕೊಟ್ಟ  ಹೇಳಿಕೆಯನ್ನು ಸಂಜೆಗೆ ಬದಲಾಯಿಸುತ್ತಾರೆ. ಸಲೂನ್ ಗಳನ್ನೂ  ತೆರೆಯಲು ಅವಕಾಶ ಎಂಬ  ಬೇಜವಾಬ್ದಾರಿ ಹೇಳಿಕೆ ಯನ್ನು ಅವರು ಮೊದಲಿಗೆ ನೀಡಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ  ಮುಂದಿಟ್ಟ ಸರಕಾರ ಮದ್ಯದಂಗಡಿಗಳನ್ನೂ ಕುಡುಕರಿಗೆ ಮುಕ್ತವಾಗಿಸಿದೆ. ಅದರಲ್ಲೂ,  ಮದ್ಯದಂಗಡಿಗಳಲ್ಲಿನ ನೂಕು ನುಗ್ಗಲು, ಜನಜಂಗುಳಿ ನೋಡಿದರೆ ಸರಕಾರದ ಇದುವರೆಗಿನ  ಪ್ರಯತ್ನವನ್ನೆಲ್ಲಾ, ಜಿಲ್ಲಾಡಳಿತ ವ್ಯರ್ಥಗೊಳಿಸುತ್ತಿದೆಯೆಂದನಿಸುತ್ತಿದೆ. ಇಲ್ಲಿ  ಇದು ಸರಕಾರದ ಕಾನೂನು ಸಡಿಲಿಕೆಯಿಂದಲೇ ಅಥವಾ ಜಿಲ್ಲಾಧಿಕಾರಿ ಆದೇಶವಾಗಿರುವುದೇ?  ಎಂಬುವುದೇ ಜನಗಳಲ್ಲಿ ಗೊಂದಲ ಮೂಡಿಸಿದೆ. ಆದ್ದರಿಂದ   ಡಿ. ಸಿ. ಯವರು ಪ್ರಸಕ್ತ  ಸನ್ನಿವೇಶವನ್ನು ಮನಗಂಡು ಕನಿಷ್ಠ ಅವಿಭಜಿತ ದ. ಕ. ಜಿಲ್ಲೆಯ ಭಾಗವಾದ ಉಡುಪಿ  ಹೊಂದಿರುವಷ್ಟಾದರೂ ನಿರ್ಬಂಧಗಳನ್ನು ಇಲ್ಲಿಯೂ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.  ಮದ್ಯದಂಗಡಿಗಳಲ್ಲಿನ ದುರವಸ್ಥೆಗಳನ್ನು ಗಮನಹರಿಸಿ ತಕ್ಷಣ ಆದನ್ನು  ತೆರೆಯಲು ನೀಡಿರುವ  ಆದೇಶವನ್ನು ಹಿಂಪಡೆಯಬೇಕು ಎಂಬುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.