ಗೃಹರಕ್ಷಕರಿಗೆ ಅಕ್ಕಿ ವಿತರಣೆ

ಮಂಗಳೂರು, ಏಪ್ರಿಲ್ 20, ಜಿಲ್ಲಾ ಗೃಹರಕ್ಷಕದಳ  ಮೇರಿಹಿಲ್ ನಲ್ಲಿ ಘಟಕದ  ಗೃಹರಕ್ಷಕರಿಗೆ ಅಕ್ಕಿ ವಿತರಣೆ ಕಾರ್ಯಕ್ರಮ ಇಂದು ಜರುಗಿತು.ಕೊರೋನ ರೋಗದಿಂದಾಗಿ ಜಿಲ್ಲೆಯು ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿ, ಜನಸಾಮಾನ್ಯರಿಗೆ ಬಹಳಷ್ಟು ತೊಂದರೆ ಉಂಟಾಗಿರುವುದನ್ನು ಕಂಡು ಗೃಹರಕ್ಷಕರಿಗೆ  ಸಹಾಯ ಮಾಡುವ ಉದ್ದೇಶದಿಂದ  ಈ ಅಕ್ಕಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಂಪುಟ ಕಾಯದರ್ಶಿ ವಿಜಯ ವಿಷ್ಣು ಮಯ್ಯ, ಲಯನ್ಸ್‍ನ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ವಸಂತ ಶೆಟ್ಟಿ ಮತ್ತು ಜೇಸಿಐ ಮಂಗಳೂರು ಇದರ ಮಹೇಶ್ ಕಾಮತ್ ಇವರ ಪ್ರಾಯೋಜಕತ್ವದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ|| ಮುರಲೀ ಮೋಹನ ಚೂಂತಾರು  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಘಟಕದ 100 ಗೃಹರಕ್ಷಕರಿಗೆ ತಲಾ 5 ಕೆ.ಜಿ.ಯಂತೆ ಅಕ್ಕಿಯನ್ನು ಈ ಸಂದರ್ಭದಲ್ಲಿ ವಿತರಿಸಿದರು.ಲಯನ್ಸ್ ಕ್ಲಬ್‍ನ  ಮಾಜಿ ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಮಾತನಾಡಿ, ಪ್ರಕೃತಿ ನಮಗೆ ಸಣ್ಣ ವೈರಾಣುವಿನಿಂದ ನಾವೆಲ್ಲ ಇಂದು ಮನೆಯೊಳಗೆ ಕುಳಿತುಕೊಳ್ಳುವಂತೆ ಮಾಡಿದೆ. ಈ ಕೋವಿಡ್-19  ಸಮಸ್ಯೆಯಿಂದ  ಕಷ್ಟದಲ್ಲಿರುವ ಗೃಹರಕ್ಷಕರಿಗೆ ನಮ್ಮಿಂದ ಚಿಕ್ಕ ಸಹಾಯವನ್ನು ಮಾಡಲು ಅವಕಾಶ ಸಿಕ್ಕಿದೆ. ಕೊಡುವ ಕೈಗಳಿಗಿಂತ ತೆಗೆದುಕೊಳ್ಳುವ ಕೈಗಳು ಮೇಲು ಹಾಗೂ ಗೃಹರಕ್ಷಕರಿಗೆ ಸಹಾಯ ಮಾಡಲು ಅವಕಾಶ ಮಾಡಿಕೊಟ್ಟ ಡಾ|| ಮುರಲಿ ಮೋಹನ ಚೂಂತಾರು ಅವರಿಗೆ ಧನ್ಯವಾದವನ್ನು ಹೇಳಿದರು.
ಈ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ನಿಷ್ಕಾಮ ಸೇವೆ ಸಲ್ಲಿಸುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ  ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಮಾತನಾಡಿ,  ಕೋವಿಡ್-19 ಸಂದರ್ಭ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಅಕ್ಕಿಯನ್ನು ವಿತರಿಸಿರುವುದಕ್ಕೆ  ಲಯನ್ಸ್ ಬಂಧುಗಳು ಮತ್ತು ಮಲ್ನಾಡು ಇಂಜಿನಿಯರ್‍ಗಳ ಹಳೆ ವಿದ್ಯಾರ್ಥಿಗಳು, ಜೇಸಿಐ ಮಂಗಳೂರು ಇವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಹಲವಾರು ಸಂಘ ಸಂಸ್ಥಗಳಿಂದ ಮನವಿ ಮಾಡಿದ್ದೇವೆ. ಈಗಾಗಲೇ 5 ಕ್ವಿಂಟಾಲ್ ಅಕ್ಕಿಯನ್ನು  100 ಗೃಹರಕ್ಷಕರಿಗೆ ವಿತರಿಸಲಾಗಿದ್ದು,  ಇದೀಗ ಮತ್ತೊಮ್ಮೆ ಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ 5 ಕ್ವಿಂಟಾಲ್ ಅಕ್ಕಿಯನ್ನು ಎಲ್ಲಾ  ಗೃಹರಕ್ಷಕರಿಗೆ ನೀಡಲಾಗುತ್ತಿದೆ. ಉಚಿತವಾಗಿ ವಿತರಿಸಿದ ದಾನಿಗಳನ್ನು ನಾವು ಯಾವತ್ತೂ ಸ್ಮರಿಸುತ್ತೇವೆ, ಗೃಹರಕ್ಷಕರನ್ನು ಸಮಾಜ ಗೌರವದಿಂದ ಗುರುತಿಸುತ್ತಿದೆ, ಅದನ್ನು ಗೃಹರಕ್ಷಕರು ಹಾಗೆಯೇ ಉಳಿಸಿಕೊಂಡು ಬರಬೇಕು ಎಂದು  ಗೃಹರಕ್ಷಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟ ರಮೇಶ್ ರವರು ಸ್ವಾಗತಿಸಿ, ವಂದನಾರ್ಪಣೆಯನ್ನು ಮಾಡಿದರು.