ಬಡ ಮಗಳ ಮದುವೆಗೆ ಅಕ್ಕಾ ಕಫೆಯ ಲಾಭಾಂಶವನ್ನು ಡಿಸಿ ಸ್ನೇಹಲ್ ಆರ್‌. ಅವರ ಹಸ್ತದಿಂದ ಹಂಚಿದ ಧಾರವಾಡ ಅಕ್ಕಾ ಕಫೆ ಸದಸ್ಯರು

ಬಡ ಮಗಳ ಮದುವೆಗೆ ಅಕ್ಕಾ ಕಫೆಯ ಲಾಭಾಂಶವನ್ನು ಡಿಸಿ ಸ್ನೇಹಲ್ ಆರ್‌. ಅವರ ಹಸ್ತದಿಂದ ಹಂಚಿದ ಧಾರವಾಡ ಅಕ್ಕಾ ಕಫೆ ಸದಸ್ಯರು  Dharwad Akka Cafe members distributed the profits of Akka Cafe for the marriage of a poor daughter a

ಲೋಕದರ್ಶನ ವರದಿ 

           ಧಾರವಾಡ .22: ಧಾರವಾಡ ಜಿಲ್ಲಾ ಪಂಚಾಯತದ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಡಿಸಿ ಕಂಪೌಂಡ ಆವರಣದಲ್ಲಿ ಅಕ್ಕಾ ಕಫೆ ನಿರ್ವಹಿಸುತ್ತಿರುವ ಕಬ್ಬೆನೂರ ಗ್ರಾಮದ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘವು ಪ್ರಸಕ್ತ ವರ್ಷ ಅಕ್ಕಾ ಕಫೆಯ ಲಾಭಾಂಶದಲ್ಲಿ ಬಡ ಹೆಣ್ಣುಮಗಳ ಮದುವೆಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರ ಮೂಲಕ ರೂ. 20 ಸಾವಿರ ನಗದು, ಸೀರೆ, ಹಣ್ಣು ಕಾಯಿ, ತಾಂಬೂಲ ನೀಡಿ ಸಹಾಯ ಮಾಡಿತು.  

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು (ಏ.22) ಬೆಳಿಗ್ಗೆ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಪ್ರತಿನಿಧಿಗಳಾದ ರಾಜೇಶ್ವರಿ ಮಂಜುನಾಥ ಪವಾಡಿ ಹಾಗೂ ಶಿವಲೀಲಾ ಕಮ್ಮಾರ ಅವರು ಕುಂದಗೋಳ ತಾಲೂಕಿನ ಗುಡೆನಕಟ್ಟಿ ಗ್ರಾಮದ ಪ್ರತಿದಿನ ಕೂಲಿ ಮಾಡುವ ಬಡ ಕುಟುಂಬದ ಲಕ್ಷ್ಮವ್ವ ಸಿದ್ದುನವರ ಹಾಗೂ ಮದುವೆ ಆಗುವ ಅವರ ಮಗಳು ಭೂಮಿಕಾ ಸಿದ್ದುನವರ ಅವರಿಗೆ ತಮ್ಮ ಸಂಘದ ಲಾಭಾಂಶದಲ್ಲಿನ ಮೊತ್ತವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರ ಹಸ್ತದಿಂದ ಅವರಿಗೆ ಕೊಡಿಸಿ, ಆರ್ಶಿವದಿಸಿದರು.  

ಈ ಸಂದರ್ಭದಲ್ಲಿ ಸಂತಸದಿಂದ ಮಾತನಾಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು, ಅಕ್ಕಾ ಕಫೆಯ ಕಾರ್ಯ ಇತರರಿಗೆ ಮಾದರಿ ಆಗಿದೆ. ತಮ್ಮ ಲಾಭದ ಹಣವನ್ನು ಬಡ ಕುಟುಂಬದ ಮದುವೆಗೆ ನೀಡಿ, ಇತರರಿಗೆ ಸ್ಪೂರ್ತಿ ಆಗಿದ್ದಾರೆ ಎಂದರು.  

ಗುಡೆನಕಟ್ಟಿ ಗ್ರಾಮದ ಸಿದ್ದುನವರ ಕುಟುಂಬದ ಯಜಮಾನ ಬಸವರಾಜ ಅವರು ತೀರಿ ಹೋಗಿದ್ದು, ಮಗಳ ಮದುವೆಯ ಭಾರ ತಾಯಿ ಲಕ್ಷ್ಮವ್ವಳ ಮೇಲಿದೆ. ಸಂಘಕ್ಕೆ ಸಾಲ ಕೇಳಲು ಬಂದವರಿಗೆ ಧನಸಹಾಯ ಮಾಡಿದ ರಾಜೇಶ್ವರಿ ಹಾಗೂ ಶಿವಲೀಲಾ ಅವರಿಗೆ ಅಭಿನಂದನೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಸಂಘಕ್ಕೆ ಪ್ರಸಕ್ತ ಸಾಲಿನ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಬಂದಿರುವುದು ಸಾರ್ಥಕವಾಗಿದೆ ಎಂದು ಅವರು ಸ್ಮರಿಸಿದರು.